ವಿರಾಜಪೇಟೆ, NEWS DEKS ನ.21: ಸಮೀಪದ ಅರಪಟ್ಟು ಗ್ರಾಮದ ನೆಲ್ಯಾಳು ದೇವರ ಕಾಡಿನಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹಾಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ದೇವರ ಕಾಡಿನಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪ ಸ್ವಾಮಿಗೆ ಭಕ್ತರು ಹರಕೆಯ ರೂಪದಲ್ಲಿ ಸಾಕುಪ್ರಾಣಿಗಳ ಪ್ರತಿಕೃತಿಗಳನ್ನು ಅರ್ಪಿಸುವ ಸಂಪ್ರದಾಯವು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿವರ್ಷ ನವೆಂಬರ್ನಿಂದ ಡಿಸೆಂಬರ್ವರೆಗೆ ಒಂದು ತಿಂಗಳ ಕಾಲ ದೇವಸ್ಥಾನದಲ್ಲಿ ಅರ್ಚಕರಿಂದ ನಿತ್ಯ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ವಾರ್ಷಿಕ ಮಹಾಪೂಜೆಯ ಅಂಗವಾಗಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಸ್ಥಳೀಯ ಅರ್ಚಕರಾದ ರಾಮಪ್ರಸಾದ್ ಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮೊದಲಿಗೆ ಸಂಕಲ್ಪ ಪೂಜೆ ನೆರವೇರಿಸಿ, ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಿಯಾಳ ಅಭಿಷೇಕ, ಅಲಂಕಾರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ಮಹಾಮಂಗಳಾರತಿಯ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಆಗಮಿಸಿದ ಭಕ್ತಾದಿಗಳಿಗೆ ನೆಲ್ಯಾಳು ಕುಟುಂಬಸ್ಥರ ವತಿಯಿಂದ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕಡಂಗ, ಮುರೂರು, ಅರಪಟ್ಟು ಹಾಗೂ ಕೆದಮುಳ್ಳೂರು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
















