ಮಡಿಕೇರಿ ಏ.7 : ನಾಪೋಕ್ಲುವಿನಲ್ಲಿ ಆಯೋಜಿತ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆ ‘ಅಪ್ಪಚೆಟ್ಟೋಳಂಡ ಹಾಕಿ ಉತ್ಸವ’ದ ಸೆಮಿಫೈನಲ್‍ಗಳಲ್ಲಿ ವೀರೋಚಿತ ಗೆಲುವು ಸಾಧಿಸಿದ ಕುಲ್ಲೇಟಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಏ.9 ರಂದು ಪ್ರಶಸ್ತಿಗಾಗಿ ಸೆಣಸಲಿವೆ.
ಕಿಕ್ಕಿರಿದು ನೆರೆದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕುಲ್ಲೇಟಿರ ತಂಡ ಟೈ ಬ್ರೇಕರ್ ಮೂಲಕ ಬಲಿಷ್ಠ ನೆಲ್ಲಮಕ್ಕಡ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು.
ಅತ್ಯಂತ ಕುತೂಹಲಕಾರಿಯಾಗಿ ನಡೆದ ಪಂದ್ಯದ ಮೊದಲಾರ್ಧದ 24 ನೇ ನಿಮಿಷ ಕುಲ್ಲೇಟಿರ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್‍ನ್ನು ತಂಡದ ಯಾಶಿಕ್ ಅವರು ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು. ದ್ವಿತೀಯಾರ್ಧದ 52ನೇ ನಿಮಿಷ ನೆಲ್ಲಮಕ್ಕಡ ತಂಡದ ಮೊಣ್ಣಪ್ಪ ಅವರು ಸೊಗಸಾದ ಗೋಲು ಬಾರಿಸುವ ಮೂಲಕ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು.
ನಂತರ ವಿಜೇತ ತಂಡವನ್ನು ನಿರ್ಧರಿಸಲು ನಡೆದ ಟೈಬ್ರೇಕರ್‍ನಲ್ಲಿ ಕುಲ್ಲೇಟಿರ ತಂಡದ ನಾಚಪ್ಪ, ಯತಿನ್, ಚಿಟ್ಟಿಯಪ್ಪ ಅವರು ಗೋಲು ಗಳಿಸಿದರೆ, ನೆಲ್ಲಮಕ್ಕಡ ತಂಡದ ಪರವಾಗಿ ಆಶಿಕ್ ಮತ್ತು ಪೂವಣ್ಣ ಮಾತ್ರ ಗೋಲು ಗಳಿಸಲು ಶಕ್ತವಾಗುವ ಮೂಲಕ ಕುಲ್ಲೇಟಿರ ತಂಡ ರೋಚಕ ಗೆಲುವು ದಾಖಲಿಸಿತು.
ಕುಪ್ಪಂಡ ತಂಡಕ್ಕೆ ಗೆಲುವು- ದ್ವಿತೀಯ ಸೆಮಿಫೈನಲ್‍ನಲ್ಲಿ ಕುಪ್ಪಂಡ (ಕೈಕೇರಿ) ತಂಡವು ಕೊಡವ ಹಾಕಿ ಉತ್ಸವದಲ್ಲಿ ಈ ಹಿಂದೆ ಚಾಂಪಿಯನ್ ಪಟ್ಟಕ್ಕೇರಿರುವ ಬಲಿಷ್ಠ ಪಳಂಗಂಡ ತಂಡಕ್ಕೆ ಸೋಲಿನ ಕಹಿಯುಣಿಸಿ ಫೈನಲ್ ಪ್ರವೇಶಿಸುವ ಮೂಲಕ ಮಹತ್ತರ ಸಾಧನೆ ಮಾಡಿತು. ಕುಪ್ಪಂಡ ತಂಡ ಟೈಬ್ರೇಕರ್ ಮೂಲಕ ಪಳಂಗಂಡ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿತು.
ನಿಗದಿತ ಅವಧಿಯಲ್ಲಿ ಇತ್ತಂಡಗಳು ಪ್ರಬಲ ಪೈಪೋಟಿ ನೀಡಿ ಗೋಲಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದರು, ಅದರಲ್ಲಿ ಯಶ ಕಾಣದೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ವಿಜೇತ ತಂಡವನ್ನು ನಿರ್ಧರಿಸುವ ಟೈಬ್ರೇಕರ್‍ನಲ್ಲಿ ಕುಪ್ಪಂಡ ತಂಡದ ಸೋಮಯ್ಯ, ಜಗತ್, ನಾಚಪ್ಪ ಮತ್ತು ಮಂದಣ್ಣ ಗೋಲು ಗಳಿಸಿದರೆ, ಪಳಂಗಂಡ ಪರವಾಗಿ ಅಜಯ್ ಮತ್ತು ಪ್ರಜ್ವಲ್ ಮಾತ್ರ ಗೋಲು ಗಳಿಸಲು ಶಕ್ತರಾಗುವುದರೊಂದಿಗೆ ಕುಪ್ಪಂಡ ಪೈನಲ್‍ಗೆ ನೆಗೆದೇರಿತು. 3 ಮತ್ತು 4ನೇ ಸ್ಥಾನಕ್ಕಾಗಿ ಭಾನುವಾರ ನೆಲ್ಲಮಕ್ಕಡ ಮತ್ತು ಪಳಂಗಂಡ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಉದ್ಘಾಟನೆ : ಕುತೂಹಲಕಾರಿ ಸೆಮಿಫೈನಲ್ ಪಂದ್ಯವನ್ನು ಭಾರತ ಹಾಕಿ ತಂಡದ ಮಾಜಿ ನಾಯಕ ಮನೆಯಪಂಡ ಎಂ. ಸೋಮಯ್ಯ ಉದ್ಘಾಟಿಸಿದರು. ಈ ಸಂದರ್ಭ ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪೂಮಾಲೆ ಕೊಡವ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮೊದಲಾದ ಗಣ್ಯರು ಹಾಜರಿದ್ದರು.
ಸನ್ಮಾನ ; ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಾಲೇಕಂಡ ಬೋಪಯ್ಯ, ಪಾಲೇಕಂಡ ಬೆಳ್ಳಿಯಪ್ಪ ಮತ್ತು ಮಾರಮಾಡ ಮಾಚಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಉತ್ಸವ ಸಮಿತಿಯ ಪ್ರಮುಖರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಪಟ್ಟೆದಾರ ಅಪ್ಪಚೆಟ್ಟೋಳಮಡ ಮಿಟ್ಟು ಈರಪ್ಪ , ಅತಿಥಿ ಗಣ್ಯರು ಹಾಜರಿದ್ದರು.