ಮಡಿಕೇರಿ ಏ.10 : ಯೋಗಾಸನ, ಪ್ರಾಣಾಯಾಮ ಅಭ್ಯಾಸ ಮಾಡುವದರಿಂದ ಉತ್ತಮ ಮನುಜನಾಗಲು ಸಾಧ್ಯವೆಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ, ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.
ವಾಂಡರ ರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಮಕ್ಕಳ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಜ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು, ಆತ್ಮಶಕ್ತಿ ವೃದ್ಧಿಗೊಳ್ಳಲು ಮಾನಸಿಕ ಸಮತೋಲನ ಮುಖ್ಯ. ಮನಸು ಯಾರಿಗೂ ಕಾಣುವದಿಲ್ಲ. ಮನಸಿನ ಬೀಗವನ್ನು ತೆರೆಯಲು ಯೋಗ, ಪ್ರಾಣಾಯಾಮದಿಂದ ಸಾಧ್ಯ, ಇದು ನಮ್ಮೊಳಗಿರುವ 72ಸಾವಿರ ನರ ನಾಡಿಗಳನ್ನು ಶುಧ್ಧ ಮಾಡುವದಲ್ಲದೆ ಗಟ್ಟಿಗೊಳಿಸುತ್ತದೆ. ಯೋಗ ಮಾಡುವದರಿಂದ ಏಕಾಗ್ರತೆ ಮೂಡುತ್ತದೆ. ಮನಸು ಕ್ರಿಯಾಶೀಲವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಉತ್ತಮ ಮಾನವನಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಶಿಬಿರದಲ್ಲಿ ಕಲಿಸುವದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಗೋವಾ ಮೂಲದ ಸಮಾಜ ಸೇವಕಿ ರೂಬಿ ಮಾತನಾಡಿ; ಜೀವನದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಿದಲ್ಲಿ ನಮಗೆ ಅದಕ್ಕಿಂತ ದುಪ್ಪಟ್ಟು ಸಹಕಾರವಾಗಲಿದೆ. ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕು, ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವೆಂದು ಉದಾಹರಣೆ ಸಹಿತ ವಿವರಿಸಿದರು.
ಇದೇ ಸಂದರ್ಭದಲ್ಲಿ ಕಳೆದ 29 ವರ್ಷಗಳಿಂದ ಶಿಬಿರ ಆಯೋಜನೆ ಮಾಡಿಕೊಂಡು ಬರುತ್ತಿರುವ ಶಿಬಿರದ ಸಂಚಾಲಕ ಬಾಬು ಸೊಮಯ್ಯ ಅವರನ್ನು ಅನಂತಶಯನ ಅವರು ಶಿಬಿರದ ಮಕ್ಕಳೊಂದಿಗೆ ಸನ್ಮಾನಿಸಿ, ಗೌರವಿಸಿದರು.