ಮಡಿಕೇರಿ ಏ.13: ಬಿಜೆಪಿ ಹೈ ಕಮಾಂಡ್ ಮೊದಲ ಪಟ್ಟಿಯಲ್ಲೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿಸಿದ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪಕ್ಷ ಪ್ರಮುಖರು ಹಾಗೂ ಆಪ್ತ ವರ್ಗದವರೊಂದಿಗೆ ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮೊದಲಿಗೆ ಸಂಪ್ರದಾಯದಂತೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಶ್ರೀ ಭಗಂಡೇಶ್ವರ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ತಲಕಾವೇರಿಗೆ ತೆರಳಿ ಕಾವೇರಿ ಮಾತೆಯ ತೀರ್ಥ ಕುಂಡಿಕೆ ಬಳಿ ವಿಶೇಷ ಪೂಜೆ, ಪ್ರಾರ್ಥನೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೋಪಯ್ಯ, ಮೊದಲ ಪಟ್ಟಿಯಲ್ಲಿಯೇ ಕೊಡಗಿನ ಎರಡೂ ಕ್ಷೇತ್ರಗಳಿಗೆ ಹಾಲಿ ಶಾಸಕರನ್ನೇ ವರಿಷ್ಠರು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಗೆಲ್ಲುವ ವಿಶ್ವಾಸವನ್ನಿಟ್ಟು ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ವಿಶ್ವಾಸವನ್ನು ಉಳಿಸಿಕೊಳ್ಳವ ಕಾರ್ಯವನ್ನು ನಾವು ಮಾಡುತ್ತೇವೆ. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿದರು.
ಇದೀಗ ಮಳೆಯ ಕೊರತೆ ಕಂಡು ಬಂದಿದೆ. ಇದರಿಂದಾಗಿ ರೈತಾಪಿ ವರ್ಗ ಹಾಗೂ ಕೃಷಿಕರು ಕಂಗಾಲಾಗಿದ್ದಾರೆ. ಜನರ ನೆಮ್ಮದಿಯ ಬದುಕು ಮತ್ತು ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಬೋಪಯ್ಯ ಹೇಳಿದರು.
::: ಖಂಡನೆ :::
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅವರ ಮೇಲೆ ಗುಂಡು ಹಾರಿಸಿರುವ ಘಟನೆಯನ್ನು ಶಾಸಕ ಕೆ.ಜಿ.ಬೋಪಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಯಾರೇ ಆದರು ಕಾನೂನಿಗೆ ತಗ್ಗಿಬಗ್ಗಿ ನಡೆಯಬೇಕು. ಇಲ್ಲವಾದಲ್ಲಿ ದುಷ್ಟಶಕ್ತಿಗಳನ್ನು ಸದೆ ಬಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗುಂಡಿನ ದಾಳಿ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಯಬೇಕು. ಕೃತ್ಯದಲ್ಲಿ ಪಾಲ್ಗೊಂಡವರು ಎಷ್ಟೇ ಪ್ರಭಾವಿಗಳಾದರೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಕುರಿತು ಪೊಲೀಸ್ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವ ಕೆಲಸವೂ ಆಗಬೇಕು ಎಂದು ಹೇಳಿದರು.
ಬೋಪಯ್ಯ ಅವರ ಪತ್ನಿ ಕುಂತಿ ಬೋಪಯ್ಯ, ಪಕ್ಷದ ಪ್ರಮುಖರಾದ ಗಿರೀಶ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ಮಾಚಿಮಾಡ ರವೀಂದ್ರ, ಸುವಿನ್ ಗಣಪತಿ, ಜಿ.ಪಂ ಮಾಜಿ ಸದಸ್ಯ ಸಿ.ಕೆ.ಬೋಪಣ್ಣ, ತಳೂರು ಕಿಶೋರ್, ಕಾಂಗೀರ ಸತೀಶ್, ಕಾಳನ ರವಿ, ವಿರಾಜಪೇಟೆ ಮತ್ತು ಭಾಗಮಂಡಲ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರು ಹಾಜರಿದ್ದರು.