ಸೋಮವಾರಪೇಟೆ ಏ.13 : ನಗರೋತ್ಥಾನ ಯೋಜನೆಯಡಿ 2.50 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದಲ್ಲಿ ಶೇ.80 ರಷ್ಟು ಕಾಮಗಾರಿಗಳು ನಡೆದಿದ್ದು, ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯ ರಸ್ತೆಯ ಸೋಮೇಶ್ವರ ಬಳಿ ಕೆಲ ಕಡೆ ಕಾಂಕ್ರೀಟ್ ರಸ್ತೆ ಹಾಳಾಗಿದ್ದ ಹಿನ್ನೆಲೆಯಲ್ಲಿ ವಾರ್ಡ್ ಸದಸ್ಯರ ಮನವಿ ಮೇರೆಗೆ ಇಂಜಿನಿಯರ್ ಸಲಹೆ ಪಡೆದು ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ ಮಾಡಲಾಗಿದೆ ಹೇಳಿದರು.
ಉಪಾಧ್ಯಕ್ಷ ಬಿ.ಸಂಜೀನ ಮಾತನಾಡಿ, ನಮ್ಮ ವಾರ್ಡ್ಗಳಲ್ಲಿ ನಡೆದ ಕಾಮಗಾರಿಗಳನ್ನು ನಿಂತು ಮಾಡಿಸಲಾಗಿದೆ. ಕಳಪೆ ಕಾಮಗಾರಿ ನಡೆದಿದ್ದರೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಆರೋಪಿಸಿದ ಅವರು, ಕಳೆದ 10 ತಿಂಗಳಿನಿಂದ ಪಂಚಾಯಿತಿಗೆ ಇಂಜಿನಿಯರ್ ನೇಮಕ ಮಾಡಿಲ್ಲ. ಕಾಮಗಾರಿಯ ಗುಣಮಟ್ಟವನ್ನು ನೋಡಿಕೊಳ್ಳುವುದಕ್ಕೆ ಇಂಜಿನಿಯರ್ ಇಲ್ಲದ ಮೇಲೆ ನಾವೇನೂ ಮಾಡಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಮಾತನಾಡಿ, ಹೊಸ ಬಡವಣೆ ಸೇರಿದಂತೆ ತಮ್ಮ ವಾರ್ಡ್ನಲ್ಲಿ ಉತ್ತಮ ಕಾಮಗಾರಿ ನಡೆದಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತ್ರಿಕೆಗಳಲ್ಲಿ ವರದಿಯಾಗಿದೆ. ನಗರೋತ್ಥಾನದ ಕಾಮಗಾರಿಗಳು ಕಳಪೆಯಾಗಿದ್ದರೆ, ಮೂರನೇ ಮಟ್ಟದ ಗುಣಮಟ್ಟ ಖಾತ್ರಿ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದ್ದು, ಕಳಪೆಯಾಗಿದ್ದರೆ ಸೂಕ್ತ ದಂಡ ವಿಧಿಸಲಾಗುವುದೆಂದರು.
ಸದಸ್ಯರಾದ ಜೀವನ್, ಶುಭಕರ್, ಬಿ.ಆರ್.ಮಹೇಶ್ ಮಾತನಾಡಿ, ತಮ್ಮ ವಾರ್ಡ್ನಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.