ಸೋಮವಾರಪೇಟೆ ಏ.14 : ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದು ಡ್ರಾಮಾ ಜ್ಯೂನಿಯರ್ನ ಮಾರ್ಗದರ್ಶಕ ಯೋಗೇಶ್ ಅಭಿಪ್ರಾಯಪಟ್ಟರು.
ಬೆಟ್ಟದಳ್ಳಿ ಯಶೋದೆ ರಂಗ ಟ್ರಸ್ಟ್ ಹಾಗೂ ಸಾಂದೀಪನಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ , ಸಾಂದೀಪನಿ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಕಲಾ ಕಲಿಕೆ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು.
ಶಿಬಿರವನ್ನು ಉದ್ಘಾಟಿಸಿದ ಚೌಡ್ಲು ಗ್ರಾ.ಪಂ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ವರ್ಷವಿಡೀ ಪಾಠ ಪ್ರವಚಗಳಲ್ಲೆ ತೊಡಗಿರುವ ಮಕ್ಕಳಿಗೆ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಮನಸ್ಸು ಹಾಗೂ ದೈಹಿಕವಾಗಿ ಬದಲಾವಣೆ ಸಿಕ್ಕಂತಾಗುತದೆ ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಇಂಥ ತರಬೇತಿ ಕೊಡಿಸಿದರೆ ಮುಂದೆ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್, ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ್ ,ಶಿಕ್ಷಕಿ ವಸಂತಿ, ಶಿಬಿರದ ಸಂಚಾಲಕ ನಿಶಾಂತ್ ಮುತ್ತಣ್ಣ, ನಿರ್ದೇಶಕ ಗಣೇಶ್ ಎಂ. ಭೀಮನಕೊಣೆ ಉಪಸ್ಥಿತರಿದ್ದರು.