ಮಡಿಕೇರಿ ಏ.17 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಇಂದು ನಾಮಪತ್ರ ಸಲ್ಲಿಸಿದರು.
ಮಡಿಕೇರಿಯಲ್ಲಿ ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಎಂ.ಪಿ.ಅಪ್ಪಚ್ಚು ರಂಜನ್, ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹಾಜರಿದ್ದರು.
::: ಮೆರವಣಿಗೆ ::: ನಾಮಪತ್ರ ಸಲ್ಲಿಕೆಗೂ ಮೊದಲು ಅಪ್ಪಚ್ಚು ರಂಜನ್ ಅವರು ನಗರದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಿಂದ ಗಾಂಧಿ ಮೈದಾನದವರೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.
::: ಬಿಜೆಪಿ ಸರ್ಕಾರ ::: ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಚ್ಚುರಂಜನ್ ಈ ಬಾರಿ ಬಿಜೆಪಿ 134 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಮತ್ತೆ ನಮ್ಮದೇ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ. ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದ್ದು, ಸುಮಾರು 30 ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲಲಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಏಳನೇ ಬಾರಿಗೆ ನಾನು ಸ್ಪರ್ಧಿಸುತ್ತಿದ್ದು, ಐದು ಬಾರಿ ಗೆದ್ದಿದ್ದೇನೆ, ಆರನೇ ಗೆಲುವು ದಾಖಲಿಸುವುದು ಖಚಿತವೆಂದರು. ಕಾಂಗ್ರೆಸ್ಸಿಗರು ಡೊನೇಷನ್ ನೀಡಿದ್ದಾರೆ ಅಷ್ಟೆ, ಶಾಸಕರಾದವರು ನಿರಂತರ ಜನರಿಗೆ ಸಿಗಬೇಕು. ಆದರೆ ಅರಕಲಗೋಡುವಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಪ್ರೇಕ್ಟಿಸ್ ಮಾಡಿ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಜನಸೇವೆಗಾಗಿ ಬಂದವರಲ್ಲ, ಅಪ್ಪ, ಮಗ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಮಗ ಕಾಂಗ್ರೆಸ್ ನಲ್ಲಿದ್ದರೆ, ಅಪ್ಪ ಬೆಳಿಗ್ಗೆ ಜೆಡಿಎಸ್, ರಾತ್ರಿ ಕಾಂಗ್ರೆಸ್ ಎಂದು ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ವಿರುದ್ಧ ಶಾಸಕರು ಪರೋಕ್ಷವಾಗಿ ಟೀಕಿಸಿದರು.
::: ದುರಾದೃಷ್ಟಕರ ::: ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದಿರುವುದು ದುರಾದೃಷ್ಟಕರ. ಬಿಜೆಪಿ ಅವರಿಗೆ ಸ್ಪೀಕರ್, ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನವನ್ನು ನೀಡಿದೆ. ಎಲ್ಲಾ ಸ್ಥಾನಮಾನಗಳನ್ನು ನೀಡಿದರೂ ಪಕ್ಷವನ್ನು ಬಿಟ್ಟಿರುವುದು ಸರಿಯಲ್ಲವೆಂದರು.