ಮಡಿಕೇರಿ ಏ.17 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮಂತರ್ ಗೌಡ, ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಲೋಕೇಶ್ ಹಾಗೂ ಡಾ.ಮಂತರ್ ಗೌಡ ಪತ್ನಿ ದಿವ್ಯ ಹಾಜರಿದ್ದರು.
::: ಮೆರವಣಿಗೆ ::: ನಾಮಪತ್ರ ಸಲ್ಲಿಕೆಗೂ ಮೊದಲು ಡಾ.ಮಂತರ್ ಗೌಡ ಅವರು ತಮ್ಮ ನಿವಾಸದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ನಂತರ ನಗರದ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯಿಂದ ಗಾಂಧಿ ಮೈದಾನದವರೆಗೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು.
::: ಗೆಲುವು ಖಚಿತ ::: ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂತರ್ ಗೌಡ ಮಡಿಕೇರಿ ಕ್ಷೇತ್ರದ ಜನ ಈ ಬಾರಿ ವಿದ್ಯಾವಂತರನ್ನು ಬೆಂಬಲಿಸಲಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸಲಿದ್ದು, ನನ್ನ ಗೆಲುವು ನೂರಕ್ಕೆ ನೂರು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಪರ ಇರುವ ಜನಬೆಂಬಲ ಸಹಿಸಲಾಗದೆ ಶಾಸಕ ಅಪ್ಪಚ್ಚುರಂಜನ್ ಅವರು ವೈಯುಕ್ತಿತ ಟೀಕೆಗಳನ್ನು ಮಾಡುತ್ತಿದ್ದಾರೆ. ಇದನ್ನು ಮೊದಲು ನಿಲ್ಲಿಸಬೇಕು, ನಾನು ಹೊರಗಿನವನು ಅಲ್ಲ, ಇದೇ ಜಿಲ್ಲೆಯ ಅಳಿಯ. 32 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಶಾಸಕರು ಹೇಳಿಕೊಳ್ಳುತ್ತಿದ್ದಾರೆ, ಮೊದಲು 32 ಸಾವಿರ ಮತ ಗಳಿಸುವುದನ್ನು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ ಮಂತರ್, ಕಳೆದ 25 ವರ್ಷಗಳಿಂದ ಶಾಸಕರಾದವರು ಜನಮೆಚ್ಚಿದ ಕಾರ್ಯ ಮಾಡಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆಯಲ್ಲಿ ಸಕ್ರಿಯರಾಗಿದ್ದಾರೆ, ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಒಂದೆರಡು ದಿನಗಳಲ್ಲಿ ನನ್ನ ಪರ ಪ್ರಚಾರಕ್ಕೆ ಬರಲಿದ್ದಾರೆ. ಶಾಸಕ ಅಪ್ಪಚ್ಚುರಂಜನ್ ಅವರು ಬೇರೆ ಪಕ್ಷಗಳ ಬಗ್ಗೆ ಮಾತನಾಡದೆ ತಮ್ಮ ಪಕ್ಷದವರ ವಿಶ್ವಾಸವನ್ನು ಮೊದಲು ಗಳಿಸಲಿ ಎಂದ ಮಂತರ್ ಶಾಸಕರ ಬೆಂಬಲಿಗರೇ ಬಂಡಾಯವಾಗಿದ್ದಾರೆ ಎಂದು ಹೇಳಿದರು.