ಮಡಿಕೇರಿ ಏ.17 ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಪಟ್ರಪಂಡ ರಘು ನಾಣಯ್ಯ ಉಪಸ್ಥಿತಿಯಲ್ಲಿ ಕೆ.ಜಿ.ಬೋಪಯ್ಯ ಅವರು ಚುನಾವಣಾಧಿಕಾರಿ ಶಬಾನ ಎಂ.ಶೇಖ್ ಅವರಿಗೆ ನಾಮಪತ್ರ ಸಲ್ಲಿಸಿದರು.
::: ಬಲ ಪ್ರದರ್ಶನ ::: ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ತೆಲುಗರಬೀದಿಯಲ್ಲಿರುವ ಶ್ರೀ ದಕ್ಷಿಣಾ ಮಾರಿಯಮ್ಮ ಹಾಗೂ ಗಣಪತಿ ದೇಗುಲದಲ್ಲಿ ಕೆ.ಜಿ.ಬೋಪಯ್ಯ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಬೋಪಯ್ಯ ಪಕ್ಷದ ಬಲ ಪ್ರದರ್ಶಿಸಿದರು.
::: ಬಿಜೆಪಿ ಅಧಿಕಾರಕ್ಕೆ ::: ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ.ಬೋಪಯ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನತೆಗೆ ನೀಡಿರುವ ಜನಹಿತ ಕಾರ್ಯಗಳ ಹಿನ್ನೆಲೆ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯು 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಸರ್ಕಾರವು ರಾಜ್ಯದ ಜನತೆಗೆ ನೀಡಿರುವ ಜನಸ್ನೇಹಿ ಕಾರ್ಯಕ್ರಮಗಳು ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂದು ತಿಳಿಸಿದರು.