ಕುಶಾಲನಗರ ಏ.17 : ಆರೋಗ್ಯಕರ ಬದುಕನ್ನು ಸಾಗಿಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತ್ಯಗತ್ಯವಾಗಿದೆ, ಸಾರ್ವಜನಿಕ ಪ್ರದೇಶಗಳಲ್ಲಿ ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಯ ಆರಾಧನೆಯೊಂದಿಗೆ ಉತ್ತಮ ಪರಿಸರ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಟೀಂ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿಯ ವತಿಯಿಂದ ಸೀಜನ್-7 ರ ಬೇಸಿಗೆ ಶಿಬಿರದ ಅಂಗವಾಗಿ ಸ್ಥಳೀಯ ಕಾವೇರಿ ಉದ್ಯಾನವನದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನೇ ದಿನೇ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬ ನಾಗರಿಕರು ಮರಗಿಡಗಳನ್ನು ನೆಟ್ಟು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಮಕ್ಕಳುತಮ್ಮ ಹುಟ್ಟು ಹಬ್ಬದ ಸಂದರ್ಭ ಒಂದು ಗಿಡವನ್ನು ಕಡ್ಡಾಯವಾಗಿ ನೆಟ್ಟು ಬೆಳೆಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಟೀಂ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿಯ ಪ್ರಮುಖರಾದ ಸಚಿನ್ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದೆ. ಆದ್ದರಿಂದ ಅಕಾಡೆಮಿಯ ವತಿಯಿಂದ ಬೇಸಿಗೆ ಶಿಬಿರದ ಅಂಗವಾಗಿ ಪ್ರತಿ ವರ್ಷ ಶಿಬಿರದಲ್ಲಿ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ಪ್ರಯತ್ನ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಅಕಾಡೆಮಿಯ ನೃತ್ಯ ಸಂಯೋಜಕ ಕಿರಣ್, ಚಂದನ್, ಪೋಷಕರಾದ ಅಕ್ಷತಾ, ಇಂದಿರಾ, ಶೃತಿ, ವೀಣಾ,ಶ್ವೇತಾ , ತುಳಸಿ, ಮಾನಸ, ಮಮತಾ,ಸೌಮ್ಯ, ಶಿವರಾಜ್ ಮತ್ತು ಶಿಬಿರದ ಮಕ್ಕಳು ಇದ್ದರು.