ನಾಪೋಕ್ಲು ಏ.17 : ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಅಜ್ಜಿಮುಟ್ಟ ಪಳ್ಳಿರಾಣೆ ಪ್ರದೇಶವನ್ನು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ಎರಡು ಮೂರು ವರ್ಷಗಳಿಂದ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀರಿನ ಟ್ಯಾಂಕ್ ಇದ್ದರೂ ನೀರು ಸರಬರಾಜಾಗುತ್ತಿಲ್ಲ. ಪ್ರಧಾನಮಂತ್ರಿಗಳ ಜಲಜೀವನ್ ಯೋಜನೆ ಇಲ್ಲಿ ಅನುಷ್ಠಾನಗೊಂಡಿಲ್ಲ. ಕುಡಿಯುವ ನೀರಿಗಾಗಿ ಸಮೀಪದ ಮಸೀದಿಯ ಬಳಿಯ ಕೊಳವೆಬಾವಿಯನ್ನು ಅವಲಂಬಿಸಬೇಕಾಗಿದೆ. ಹೆಚ್ಚಿನ ನೀರಿಗಾಗಿ ದೂರದ ಹೊಳೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರಾದ ಮoದಪಂಡ ಮೊಣ್ಣಪ್ಪ, ಇಬ್ರಾಹಿಂ ಪಿ.ಬಿ,ನಬೀಸಾ, ಫೇಮೀನಾ ಮತ್ತಿತರರು ಚುನಾವಣೆ ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ನೀಡದ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು.
ಪಳ್ಳಿರಾಣೆಗೆ ತುರ್ತಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು ಮತ್ತು ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಪಡಿಸಬೇಕು. ತಪ್ಪಿದಲ್ಲಿ ಚುನಾವಣೆ ಬಹಿಷ್ಕಾರ ಖಚಿತವೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸುಲೇಮಾನ್ ಪಿ,ಎಂ,ಸುಬೇರ್, ಪಿ.ಎಚ್.ಮಿಥುನ್. ಎಂ.ಆರ್.ಮಮ್ಮುಪಿ.ಎ,.ಶಾದುಲಿ.ಪಿ.ಎ,,ಚಾಮಿ ಬಿ.ಪಿ.ರಾಜಿವ್, ಬಿ.ಎಂ.ಹನೀಫ, ಎಂ.ಎ.ಮೈದು, ಎಂ.ಎ.ಸೂಫಿ, ರಘು ಸೇರಿದಂತೆ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು. (ವರದಿ : ದುಗ್ಗಳ ಸದಾನಂದ)