ಮಡಿಕೇರಿ ಏ.18 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಇಂದು ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರ ಬೃಹತ್ ಮೆರವಣಿಗೆ ಬಳಿಕ, ವಿರಾಜಪೇಟೆ ತಾಲ್ಲೂಕು ಕಚೇರಿಗೆ ಆಗಮಿಸಿದ ಎ.ಎಸ್.ಪೊನ್ನಣ್ಣ ಅವರು, ಚುನಾವಣಾಧಿಕಾರಿ ಶಬಾನಾ ಎಂ.ಶೇಖ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭ ಪೊನ್ನಣ್ಣ ಅವರ ಪತ್ನಿ ಪತ್ನಿ ಕಾಂಚನ ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಕಾಂಗ್ರೆಸ್ ಮುಖಂಡ ಖಾಸಿಂ, ವಕೀಲ ಶ್ರೀಧರ್ ನಾಯರ್ ಹಾಜರಿದ್ದರು.
::: ವಿಶೇಷ ಪೂಜೆ :::
ನಾಮಪತ್ರ ಸಲ್ಲಿಕೆಗೂ ಮೊದಲು ಎ.ಎಸ್.ಪೊನ್ನಣ್ಣ ಅವರು ಬೆಳಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ತಲಕಾವೇರಿ, ವಿರಾಜಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
::: ಶಕ್ತಿ ಪ್ರದರ್ಶನ :::
ನಗರದ ಸರ್ವೋದಯ ಕಾಲೇಜು ಬಳಿಯಿಂದ ಆರಂಭಗೊoಡ ಕಾಂಗ್ರೆಸ್ ಪಕ್ಷದ ಬೃಹತ್ ಮೆರವಣಿಗೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಬೆಂಬಲಿಗರು ಕಾಂಗ್ರೆಸ್ ಧ್ವಜಗಳೊಂದಿಗೆ ಜಯಘೋಷಗಳನ್ನು ಮೊಳಗಿಸುವ ಮೂಲಕ ತಮ್ಮ ಬೆಂಬಲವನ್ನು ಪೊನ್ನಣ್ಣ ಅವರಿಗೆ ವ್ಯಕ್ತಪಡಿಸಿದರು. ಬೃಹತ್ ಮೆರವಣಿಗೆ ತಾಲ್ಲೂಕು ಕಚೇರಿಯವರೆಗೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ವಿರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜಿ ಪೂಣಚ್ಚ, ಮಿದೇರಿರ ನವೀನ್, ಇಸ್ಮಾಯಿಲ್, ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
::: ಮತದಾರರಲ್ಲದವರು ಶಾಸಕರು :::
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ ಅವರು, ನಾನು ಹೊರಗಿನವನಲ್ಲ. ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಸಮೀಪದ ಬೆಳ್ಳೂರು ಮತಗಟ್ಟೆಯಲ್ಲಿ ಮತದಾನ ಮಾಡಲಿದ್ದೇನೆ. ವಿರಾಜಪೇಟೆ ಕ್ಷೇತ್ರದ ಮತದಾರರಲ್ಲದವರು ಇಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ ಎಂದು ಹೇಳಿದರು.










