ನಾಪೋಕ್ಲು ಏ.19 : ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಉತ್ಸವಬಲಿ ನಡೆಯಿತು. ಅಲ್ಲದೆ ಭಾನುವಾರ ಉತ್ಸವ ಬಲಿ ಮತ್ತು ದೀಪಾರಾಧನೆ ಜರಗಿತು.
ಹಗಲು ನೃತ್ಯಬಲಿ ನಡೆದು ಸಂಜೆ ದೀಪಾರಾಧನೆ, ಪಟ್ಟಣಿಹಬ್ಬ ನೆರವೇರಿತು.
ಬೆಳಗ್ಗೆ ತುಲಾಭಾರ, ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಜರಗಿತು.
ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು.
ಅಪರಾಹ್ನ ನಡೆದ ಜೋಡಿ ದೇವರ ನೃತ್ಯೋತ್ಸವವನ್ನು ಭಕ್ತರು ಶ್ರದ್ದಾಭಕ್ತಿಯಿಂದ ಕಣ್ತುಂಬಿಕೊಂಡರು.
ಜಾತ್ರಾ ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ್, ತಂತ್ರಿಗಳಾದ ಕೃಷ್ಣ ನೂರಿತಾಯ, ದಿವಾಕರ, ಕೃಷ್ಣಪ್ರಸಾದ್ ,ಸತ್ಯಮೂರ್ತಿ ನೆರವೇರಿಸಿದರು.
ಈ ಸಂದರ್ಭ ಬಂಡಾರ ತಕ್ಕರಾದ ಎಡಿಕೇರಿ ಪ್ರವೀಣ್, ನಾಡುತಕ್ಕರಾದ ಚೌರಿರ ಚೋಮಣಿ ಬೋಪಯ್ಯ, ಅಧ್ಯಕ್ಷ ಪೊದುವಾಡ ಸುಜಯ್, ಬೊಳ್ಳಿಯಂಡ ಹರೀಶ್, ಸೇರಿದಂತೆ ಇತರ ತಕ್ಕ ಮುಖ್ಯಸ್ಥರು, ಹಾಗೂ ನಿರ್ವಹಣಾ ಮತ್ತು ವಾರ್ಷಿಕೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ.