ಸಿದ್ದಾಪುರ ಏ.19 : ಕೋಟ್ಯಂತರ ಜನ-ಜಾನುವಾರುಗಳ ದಾಹ ನೀಗಿಸುವ ಕಾವೇರಿ ನದಿ ತವರಿನಲ್ಲೇ ಮಲಿನವಾಗುತ್ತಿದ್ದು, ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಆಡಳಿತ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾವಂತ ನಾಗರಿಕರ ಪ್ರವೃತ್ತಿಯಿಂದ ಒಡಲು ಮಲಿನಗೊಳ್ಳುತ್ತಿದ್ದು, ಕೋಟ್ಯಂತರ ಜಲಚರಗಳು ಹಾಗೂ ಸಾರ್ವಜನಿಕರು ಈ ಕೊಳಕು ನೀರನ್ನು ಕುಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಮದ್ಯ ಸೇವಿಸಿ ಬಾಟಲಿ ಹಾಗೂ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನದಿಗೆ ಎಸೆದು ಇಡೀ ವಾತಾವರಣವನ್ನೆ ಕಲುಷಿಗೊಳಿಸುತ್ತಿದ್ದಾರೆ.
ಕಳೆದ ವರ್ಷ ಇದೇ ಪ್ರದೇಶದಲ್ಲಿ ಸ್ವಚ್ಚತಾಕಾರ್ಯ ನಡೆಸಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರ ಪರಿಣಾಮ ಗ್ರಾ.ಪಂ ಶುಚಿತ್ವ ಕಾಪಾಡಲು ಸೂಚಿಸಿದರೂ ನದಿ ಸಂರಕ್ಷಣೆಗೆ ಕಾಳಜಿ ವಹಿಸುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕರಡಿಗೋಡು ಗ್ರಾಮದಲ್ಲಿ ರೆಸಾರ್ಟ್ ಸೇರಿದಂತೆ ಹೋಂಸ್ಟೇಗಳು ಪ್ರವಾಸಿಗರಿಗೆ ಆಶ್ರಯ ಕಲ್ಪಿಸುತ್ತಿವೆ. ಇಲ್ಲಿಗೆ ಬರುವ ಪ್ರವಾಸಿಗರು ವಾಯು ವಿವಾಹರಕ್ಕೆ ಬಂದು ನದಿ ತೀರದಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲ್ ಮತ್ತಿತರ ತ್ಯಾಜ್ಯವನ್ನು ನದಿದಡ ಹಾಗೂ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದಾರೆ. ಈ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸುವುದರೊಂದಿಗೆ ಕಾವೇರಿ ನದಿ ಉಳಿವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ : ಕಾವೇರಿ ನದಿದಡದಲ್ಲಿ ತ್ಯಾಜ್ಯ ಸುರಿಯುತ್ತಿದ್ದರೂ ಗ್ರಾ.ಪಂ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಗ್ರಾ.ಪಂ ಗೆ ನೋಟಿಸ್ ನೀಡಲಾಗಿದ್ದು, ಶೀಘ್ರದಲ್ಲಿ ತ್ಯಾಜ್ಯ ತೆರವುಗೊಳಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಹೇಳಿಕೆ :
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದ್ದರಿಂದ ಮದ್ಯದಂಗಡಿ, ವೈನ್ಸ್ ಗಳಲ್ಲಿ ಕುಳಿತು ಮದ್ಯಸೇವನೆಯನ್ನು ನಿಷೇಧಿಸಿದ್ದರಿಂದ ಮದ್ಯಪ್ರೀಯರು ಪಾರ್ಸಲ್ ತಂದು ನದಿದಡದಲ್ಲಿ ಸೇವಿಸಿ ಆಹಾರ ಪೊಟ್ಟಣಗಳನ್ನು ಹಾಗೂ ಮದ್ಯ ಬಾಟಲಿಗಳನ್ನು ನದಿಗೆ ಎಸೆದು ವಾತಾವರಣ ಕಲುಷಿತ ಗೊಳಿಸುತ್ತಿದ್ದಾರೆ.ಬೀಟ್ ಪೋಲಿಸರು ಇವರ ಮೇಲೆ ನಿಗ ವಹಿಸಬೇಕು .:: ಎಂ.ಎ.ಕೃಷ್ಣ .ಕರಡಿಗೋಡು ::
ಪ್ರತಿನಿತ್ಯ ಶ್ರೀ ಬಸವೇಶ್ವರ ದೇವರ ಮೂರ್ತಿಯನ್ನು ಮಾತೆ ಕಾವೇರಿ ತೀರ್ಥದಲ್ಲಿ ಅಭಿಷೇಕ ಮಾಡಲಾಗುತ್ತಿದೆ. .ನದಿ ದಡದಲ್ಲಿ ಈ ರೀತಿ ಕಲುಷಿತ ಗೊಳಿಸುತ್ತಿರುವವರ ಮೇಲೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು. :: ಕುಕ್ಕುನೂರು ಕಿಷನ್.ಗ್ರಾಮಸ್ಥ : :
ರೆಸಾರ್ಟ್, ಹಾಗೂ ಹೋಂ ಸ್ಟೇಗಳ ಮಾಲಿಕರಿಗೆ ಗ್ರಾ.ಪಂ ಪರಿಸರ ಸಂರಕ್ಷಣೆಗೆ ಸಂದಧಪಟ್ಟಂತೆ ನೋಟಿಸ್ ಜಾರಿ ಮಾಡಬೇಕು ಕೂಡಲೆ ರಸ್ತೆ , ನದಿದಡ ಶುಚಿತ್ವ ಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರ ಸಹಕಾರ ದೊಂದಿಗೆ ಉಗ್ರ ಹೋರಾಟ ಮಾಡ ಬೇಕಾಗುತ್ತದೆ. : : ಶಾಜನ್, ನಿವಾಸಿ ::
ವರದಿ : ಕೃಷ್ಣ ಸಿದ್ದಾಪುರ