ಸೋಮವಾರಪೇಟೆ ಏ.19 : ಮೀಸಲು ಅರಣ್ಯದಂಚಿನಲ್ಲಿರುವ ನೇರಳೆ ಗ್ರಾಮಕ್ಕೆ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಗ್ರಾಮದ ಪ್ರವೇಶ ದ್ವಾರದಲ್ಲೇ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಗ್ರಾಮಸ್ಥರು, ನೇರಳೆ ಗ್ರಾಮದಲ್ಲಿ 30 ಕುಟುಂಬಗಳು ವಾಸವಿದ್ದು, ಕಳೆದ 20 ವರ್ಷಗಳಿಂದ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಬಹುತೇಕ ಕುಟುಂಬಗಳು ಕೂಲಿ ಕೆಲಸ ಮಾಡಿ ಬದುಕುವಂತಹ ಪರಿಸ್ಥಿತಿ ಇದೆ. ಕೃಷಿ ಫಸಲನ್ನು ಕಾಡಾನೆ ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳವಂತ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಾಡಾಂಚಿನಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದರೂ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಉಲ್ಲಾಸ ದೂರಿದ್ದಾರೆ.
ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ನೀಡಿದರೂ ಅನುದಾನ ಕಲ್ಪಿಸಿಲ್ಲ. ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ಈ ಕಾರಣದಿಂದ ಚುನಾವಣೆಯ ಬಹಿಷ್ಕಾರದ ನಿರ್ಧರಿಸಲಾಗಿದೆ ಎಂದರು.