ಮಡಿಕೇರಿ ಏ.19 : ವಿಧಾನಸಭಾ ಚುನಾವಣೆಗೆ ಈ ಬಾರಿ ಬಿಎಸ್‍ಪಿ ಪಕ್ಷ ಕಣಕ್ಕಿಳಿಯುತ್ತಿರುವುದು ಗೆಲುವಿನ ಪ್ರಮುಖ ಉದ್ದೇಶಕ್ಕಾಗಿ ಅಲ್ಲ. ಶೋಷಿತ ಸಮುದಾಯಗಳ ಪರವಾದ ಸಾಮಾಜಿಕ ಚಳವಳಿಗಳನ್ನು ನಡೆಸುವುದು ನಮ್ಮ ಗುರಿಯಾಗಿದೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಭೀಮ ಪುತ್ರಿ ರೇವತಿ ರಾಜನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚುನಾವಣೆಯ ಮೂಲಕ ಚದುರಿದಂತಿರುವ ಬಿಎಸ್‍ಪಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಟ ಗೊಳಿಸಲಾಗುವುದು ಮತ್ತು ಚುನಾವಣೆಯ ಬಳಿಕ ನಮ್ಮ ಸಾಮಾಜಿಕ ಚಳವಳಿಗಳು ಆರಂಭಗೊಳ್ಳಲಿದೆ. ಬಹುಜನರ ಪಕ್ಷವಾಗಿರುವ ‘ಬಹುಜನ ಸಮಾಜ ಪಕ್ಷ’ದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆಗೆ ದಿವಿಲ್ ಕುಮಾರ್ ಎ.ಎ ಅವರು ಮಾ.20 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಮೂರ್ನಾಡು ಬಳಿಯ ಪಾಲೇಮಾಡು ಗ್ರಾಮದ ಕಾನ್ಶಿರಾಮ ನಗರದಿಂದ ಪಕ್ಷದ ಮೆರವಣಿಗೆ ಆರಂಭಗೊಳ್ಳಲಿದೆ. ಮೂರ್ನಾಡು, ಹಾಕತ್ತೂರು ಮೂಲಕ ಮಡಿಕೇರಿಗೆ ಆಗಮಿಸಿ, ಸುದರ್ಶನ ವೃತ್ತದ ಫೀ.ಮಾ.ಕೆ.ಎಂ. ಕಾರ್ಯಪ್ಪ ವೃತ್ತ, ಜ.ತಿಮ್ಮಯ್ಯ ವೃತ್ತ, ನಗರ ಠಾಣೆ, ಹಳೇ ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ವೃತ್ತಕ್ಕಾಗಿ ರಾಜಾಸೀಟು ಮೂಲಕ ಗಾಂಧಿ ಮೈದಾನಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.
ಮೆರವಣಿಗೆಯ ಸಂದರ್ಭ ನಗರ ವ್ಯಾಪ್ತಿಯ ವಿವಿಧೆಡೆಗಳಲ್ಲಿರುವ ವೀರಯೋಧರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗುತ್ತದೆ. ನಾಮಪತ್ರ ಸಲ್ಲಿಸಿದ ನಂತರ ಗಾಂಧಿ ಮೈದಾನದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ ಎಂದು ರೇವತಿ ಹೇಳಿದರು.
ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಪಂಚಾಯ್ತಿಯ ಕಂಡಂಗಾಲ ಗ್ರಾಮದವರಾದ ದಿವಿಲ್ ಕುಮಾರ್ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ. ಪಕ್ಷದ ಕಚೇರಿಯನ್ನು ನಾವು ನಗರದಲ್ಲಿ ಆರಂಭಿಸಿದ್ದು, ಇದು ಚುನಾವಣೆ ಬಳಿಕವೂ ಮುಂದುವರೆಯಲಿದೆ. ವಾರದ ನಾಲ್ಕು ದಿನಗಳ ಕಾಲ ದಿವಿಲ್ ಕುಮಾರ್ ಅವರು ಕಚೇರಿಯಲ್ಲಿ ಲಭ್ಯವಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸಲಿದ್ದಾರೆ ಎಂದರು.
ಅಭ್ಯರ್ಥಿ ದಿವಿಲ್ ಕುಮಾರ್ ಮಾತನಾಡಿ, ಬಿಎಸ್‍ಪಿ ಪಕ್ಷ ಎನ್ನುವುದು ಯಾವುದೇ ಒಂದು ಸಮೂಹಕ್ಕೆ ಸೀಮಿತವಾದ ಪಕ್ಷವಲ್ಲ. ಇದು ಬಹುಜನರ ಪಕ್ಷ, ಬಡಜನರ ಪಕ್ಷವೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಬೆಳ್ಯಪ್ಪ ಹಾಗೂ ಕಾರ್ಯಕರ್ತ ರವಿ ಉಪಸ್ಥಿತರಿದ್ದರು.









