ಕುಶಾಲನಗರ ಏ.20 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24ನೇ ಸಾಲಿಗೆ ರಾಜ್ಯಮಟ್ಟದ ಕ್ರೀಡಾ ವಸತಿ ಶಾಲೆ, ವಸತಿ ನಿಲಯಗಳಿಗೆ ಪ್ರವೇಶಾತಿ ಸಂಬಂಧ ಕಿರಿಯರ ವಿಭಾಗದ ಕ್ರೀಡಾಪಟುಗಳ ಆಯ್ಕೆ ಪರಿಶೀಲನಾ ಪ್ರಕ್ರಿಯೆ ಶಿಬಿರ ಕೂಡಿಗೆಯ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಆರಂಭಗೊಂಡಿದೆ.
ಕಿರಿಯರ ವಿಭಾಗದ ಹಾಕಿ ಕ್ರೀಡೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳ ಪೈಕಿ 22 ಬಾಲಕಿಯರು, 30 ಬಾಲಕರು, ಫುಟ್‌ಬಾಲ್ ವಿಭಾಗದಲ್ಲಿ 25, ಜಿಮ್ನಾಸ್ಟಿಕ್‌ನಲ್ಲಿ ಓರ್ವ ವಿದ್ಯಾರ್ಥಿನಿ , ಇಬ್ಬರು ಬಾಲಕರು ಭಾಗವಹಿಸಿ ಅಂತಿಮ ಆಯ್ಕೆ ಪ್ರಕ್ರಿಯೆಗೆ ನೋಂದಣಿಯಾಗಿದ್ದಾರೆ.
ನೋಂದಣಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ವಸತಿ ಸೌಲಭ್ಯ ಮತ್ತು ಅಹಾರದ ವ್ಯವಸ್ಥೆ ಒದಗಿಸಲಾಗಿದೆ ಎಂದು ನಿಯೋಜಿತ ಶಿಬಿರಾಧಿಕಾರಿ ದೇವಕುಮಾರ್, ಶಿಬಿರಾಧಿಕಾರಿ ಹಾಕಿ ತರಬೇತಿದಾರ ಬಿ.ಎಸ್ .ವೆಂಕಟೇಶ್ ಮಾಹಿತಿ ನೀಡಿದ್ದಾರೆ.