ನಾಪೋಕ್ಲು ಏ.10 : ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏ.22 ರಿಂದ ಬಾಳೆಯಡ ಕ್ರಿಕೆಟ್ ನಮ್ಮೆ ನಡೆಯಲಿದ್ದು, ಕ್ರೀಡಾಕೂಟಕ್ಕೆ ಭರದಿಂದ ಪೂರ್ವ ತಯಾರಿ ಕಾರ್ಯ ನಡೆಯುತ್ತಿದೆ. ಈ ಬಾರಿ ದಾಖಲೆಯ 252 ಕುಟುಂಬಗಳು ನೋಂದಾವಣೆ ಮಾಡಿಕೊಂಡಿವೆ ಎಂದು ಬಾಳೆಯಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಕರ್ನಲ್ ಸುಬ್ರಮಣಿ ತಿಳಿಸಿದರು.
ನಾಪೋಕ್ಲು ವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ. 22 ರ ಬೆಳಗ್ಗೆ 7.30 ಕ್ಕೆ ನಾಪೋಕ್ಲು ಭಗವತಿ ದೇವಾಲಯದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿ, ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ.
10.20 ಕ್ಕೆ ಮುಖ್ಯ ಅತಿಥಿಗಳೊಂದಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಮೈದಾನದಲ್ಲಿ ಜಾಥಾ ನಡೆಸಲಾಗುವುದು. ಧ್ವಜಾರೋಹಣ, ಉದ್ಘಾಟನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಚೆಟ್ಟಳ್ಳಿ ವಿಮೆನ್ಸ್ ತಂಡ-ಸಂಭ್ರಮ ಕೊಡವತೀಸ್ ಹಾಗೂ ಟಿ ಶೆಟ್ಟಿಗೇರಿ ಮಹಿಳಾ ತಂಡ-ಜೋಮಾಲೆ ಕೊಡವತೀಸ್ ತಂಡದಿಂದ ಪ್ರದರ್ಶನ ಪಂದ್ಯಾಟ ನಡೆಯಲಿದೆ ಎಂದರು.
ಏ.22 ರಿಂದ ಮೇ ತಿಂಗಳ 21 ರವರೆಗೆ 30 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 2772 ಆಟಗಾರರು ಪಾಲ್ಗೊಳ್ಳಿಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಚಿಮಂಡ ಕರ್ನಲ್ ಮುತ್ತಪ್ಪ, ನಿವೃತ ಕರ್ನಲ್ ಮಹಾವೀರ ಚಕ್ರ ಫುರಸ್ಕೃತ ಪುಟ್ಟಿಚಂಡ ಗಣಪತಿ, ಪರ್ವತಾರೋಹಿ ಜಮ್ಮಡ ಪ್ರೀತಿ, ಒಲಂಪಿಯನ್ ಬೊಳ್ಳoಡ ಪ್ರಮೀಳಾ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವಿಜೇತ ತಂಡಗಳಿಗೆ ರಿಪಬ್ಲಿಕ್ ಟಿ.ವಿ ಚೇರಂಡ ಕಿಶನ್ ಪ್ರಾಯೋಜಿಸಿದ ಪ್ರಥಮ ಮತ್ತು ದ್ವಿತೀಯ ಆಕರ್ಷಕ ಟ್ರೊಫಿ, ನಗದು ಜೊತೆಗೆ ವೈಯುಕ್ತಿಕ ಟ್ರೊಫಿ, ಪಂದ್ಯ ಪುರುಷ, ಉತ್ತಮ ಬ್ಯಾಟ್ಸ್ ಮನ್, ಅಲ್ ರೌಂಡರ್, ಮ್ಯಾನ್ ಆಫ್ ದಿ ಫೈನಲ್, ಪಂದ್ಯ, ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗಳನ್ನು ನೀಡಲಾಗುವುದು.
ಮಾಜಿ ಒಲಂಪಿಯನ್ ಅರ್ಜುನ್ ಪ್ರಶಸ್ತಿ ಪುರಸ್ಕೃತ ಎಸ್.ವಿ. ಸುನಿಲ್ ಅವರು ಅವರ ತಾಯಿಯ ನೆನಪಿನಲ್ಲಿ ಅತೀ ಶಿಸ್ತು ಬದ್ದ ಆಟದ ತಂಡ, ಉತ್ತಮ ತಂಡ, ಉತ್ತಮ ಮಹಿಳಾ ಆಟಗಾರ್ತಿ, ಅಂತಿಮ ಆಟದ ಉತ್ತಮ ಆಟಗಾರ ಪ್ರಶಸ್ತಿ ನೀಡಲಿದ್ದಾರೆ. ಜೊತೆಗೆ ಬಾಳೆಯಡ ಕಿಶೋರ್ ಟ್ರೋಫಿ ನೀಡಲಿದ್ದಾರೆ ಎಂದು ಬಾಳೆಯಡ ಕ್ರಿಕೆಟ್ ನಮ್ಮೆ ಕಾರ್ಯದರ್ಶಿ ಸದಾ ಕುಶಾಲಪ್ಪ ಮಾಹಿತಿ ನೀಡಿದರು.
ಈ ಸಂದರ್ಭ ಬಾಳೆಯಡ ಕುಟುಂಬದ ಕಿಶೋರ್,ಪ್ರತೀಶ್,ಅಂಜು ಸುಬ್ರಮಣಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









