ಮಡಿಕೇರಿ,ಏ.21 : ಮಕ್ಕಳು ಉದಾಸೀನ ಮನೋಭಾವದಿಂದ ಹೊರಬಂದು ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಹಿರಿಯ ಕ್ರೀಡಾಪಟು ಜಿ.ಟಿ.ರಾಘವೇಂದ್ರ ಹೇಳಿದರು.
ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳಿಗೆ ಹಿತವಚನಗಳನ್ನು ಹೇಳಿದರು.
ಮಕ್ಕಳು ಎಂದಿಗೂಪ್ರಾಮಾಣಿಕರಾಗಿರಬೇಕು. ನಿಮ್ಮ ಹಿಂದೆ ಗುರುಗಳಿದ್ದಾರೆ, ಮುಂದೆ ಗುರಿ ಇರಬೇಕು. ಗುರುಗಳು ಹೇಳಿಕೊಡುವದನ್ನು ಶ್ರದ್ಧೆಯಿಂದ ಪಾಲಿಸಬೇಕು. ಮನಸನ್ನು ಏಕಾಗ್ರತೆಗೆ ತರಬೇಕು. ಬದ್ದತೆಯೊಂದಿಗೆ ಅಭ್ಯಾಸ ಮಾಡುವದರೊಂದಿಗೆ ಹಠವಿದ್ದರೆ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲಿ ಕಲಿಸುವದನ್ನು ಚಾಚೂ ತಪ್ಪದೆ ಅಭ್ಯಸಿಸಿದರೆ ಕೊನೆಯಲ್ಲಿ ಕ್ರಮಬದ್ಧವಾಗಿ ಹೊರಹೋಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈಗಿನ ಮಕ್ಕಳು ಬಾಲ್ಯದಿಂದಲೇ ತಪ್ಪುದಾರಿಗೆ ಹೋಗುತ್ತಿದ್ದಾರೆ, ಹಾಗಾಗಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಭಾವನೆಗಳನ್ನು ಮೂಡಿಸಬೇಕು. ತಮ್ಮ ಮಕ್ಕಳನ್ನು ದೇಶಕ್ಕಾಗಿ ಅರ್ಪಣೆ ಮಾಡಬೇಕು. ಆಗ ಮಕ್ಕಳು ದೇಶಕ್ಕೆ ಅಮೂಲ್ಯ ಆಸ್ತಿಯಾಗುವದರೊಂದಿಗೆ ಪ್ರಪಂಚಕ್ಕೆ ಮಾರ್ಗದರ್ಶಕರಾಗುತ್ತಾರೆ. ಈ ಶಿಬಿರದಲ್ಲಿ ತರಬೇತಿ ನೀಡುತ್ತಿರುವ ಗುರುಗಳು ತಮ್ಮ ಸಮಯ, ಕೆಲಸ ಎಲ್ಲವನ್ನು ಮಕ್ಕಳಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಕಲಿತು ಸಾಧನೆ ಮಾಡಿದರೆ ಅವರುಗಳ ತ್ಯಾಗಕ್ಕೆ ಬೆಲೆ ಕೊಟ್ಟಂತಾಗುತ್ತದೆ ಎಂದು ಹೇಳಿದರು. ಮಕ್ಕಳಲ್ಲಿ ಆಂಜನೇಯನಂತೆ ಅಗಾಧ ಶಕ್ತಿ ಇರುತ್ತದೆ. ಅದನ್ನು ಹೊರಸೂಸುವ ಕೆಲಸ ಆಗಬೇಕೆಂದು ಆಂಜನೇಯನ ಕತೆಯನ್ನು ಮಕ್ಕಳಿಗೆ ಉದಾಹರಿಸಿದರು.
ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರು ಇದ್ದರು.