ನಾಪೋಕ್ಲು ಏ.24 : ವಿರಾಜಪೇಟೆ ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಕ್ಷೇತ್ರದ ಹಲವೆಡೆ ರಸ್ತೆ, ವಸತಿ, ನೀರು, ವಿದ್ಯುತ್ ಗೆ ಪರದಾಡುವ ಪರಿಸ್ಥಿತಿ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ .ಪೊನ್ನಣ್ಣ ಹೇಳಿದರು.
ನಾಪೋಕ್ಲು ಪಟ್ಟಣದಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರವಾದ ಆಶ್ವಾಸನೆಗಳನ್ನು ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ವಿರಾಜಪೇಟೆ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಸಾಧಿಸಲಾಗುವುದು ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಇದುವರೆಗಿನ ಸರ್ಕಾರ ಸುಳ್ಳನ್ನು ಹೇಳುತ್ತಾ ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಅಧಿಕಾರ ಮಾಡಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜನ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಚಲಾಯಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸರ್ಕಾರದ ರಚನೆಗೆ ಆದ್ಯತೆ ನೀಡಬೇಕಾಗಿದೆ .ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದರು. ವಕ್ಫ್ ಮಾಜಿ ಅಧ್ಯಕ್ಷ ಎಂ ಎಚ್ ಅಬ್ದುಲ್ ರಹಿಮಾನ್, ಕೊಡಗು ಜಿಲ್ಲಾ ಪರಿಷತ್ತು ಮಾಜಿ ಉಪಾಧ್ಯಕ್ಷ ಪಿ.ಎಂ ಖಾಸಿಂ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ.ಇಸ್ಮಾಯಿಲ್ ಮಾತನಾಡಿದರು. ನಂತರ ಕಾರ್ಯಕರ್ತರು ಅಂಗಡಿ ಮತ್ತು ಮನೆಮನೆಗೆ ತೆರಳಿ ಪಕ್ಷದ ಪರವಾಗಿ ಮತಯಾಚಿಸಿದರು.
ಈ ಸಂದರ್ಭ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕಕ್ಕಬೆ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿನ್ನಪ್ಪ, ನಾಪೋಕ್ಲು ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಲೀಂ ಹ್ಯಾರಿಸ್, ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರ್ತಂಡ ಶೈಲ ಕುಟ್ಟಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಬೊಳ್ಳಂಡ ಶರೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿರಾಜ್, ರಾಣಿ ಅಪ್ಪಣ್ಣ ಪೇರೂರು, ಹನೀಫ್, ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬಾ, ವಿವಿಧ ಗ್ರಾಮ ಪಂಚಾಯತಿ ಸದಸ್ಯರು, ಕಾಂಗ್ರೆಸ್ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. (ವರದಿ : ದುಗ್ಗಳ ಸದಾನಂದ)