ಮಡಿಕೇರಿ ಏ.30 : ಸೂಡಾನ್ ದೇಶದಲ್ಲಿ ಸೇನೆ ಹಾಗೂ ಅರೆ ಸೇನಾಪಡೆಗಳ ನಡುವೆ ಸಂಘರ್ಷ ಸಂಭವಿಸುತ್ತಿದ್ದು, ವಿರಾಜಪೇಟೆ ತಾಲ್ಲೂಕಿನ ಒಂದು ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮೊಹಿದ್ದೀನ್ ಅವರ ಕುಟುಂಬ ಸೂಡಾನಿನ ತೀವ್ರ ಸಂಘರ್ಷದ ಪ್ರದೇಶವಾದ ಖಾರ್ಟೂಮ್‌ನಲ್ಲಿ ಸಿಲುಕಿತ್ತು. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಈ ಬಗ್ಗೆ ಮಾಹಿತಿ ಬಂದ ಕೂಡಲೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಆರ್.ಎಂ.ಅನನ್ಯ ವಾಸುದೇವ್ ಅವರಿಗೆ ಈ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿದ್ದರು.
ಮೊಹಿದ್ದೀನ್ ಅವರ ಕುಟುಂಬದ ಜೊತೆಗೆ ನಿರಂತರವಾದ ಸಂಪರ್ಕ ಸಾಧಿಸಿ, ಧೈರ್ಯವನ್ನು ತುಂಬಿದ ಅನನ್ಯ ವಾಸುದೇವ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು. ಪರಿಣಾಮ 8 ತಿಂಗಳ ಹಾಗೂ 2.5 ವರ್ಷದ ಮಕ್ಕಳು ಸೇರಿದಂತೆ ಮೊಹಿದ್ದೀನ್ ಅವರ ಕುಟುಂಬದ 6 ಸದಸ್ಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕ್ಷೇಮವಾಗಿ ಕರೆತರುವಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಶಸ್ವಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.








