ಮಡಿಕೇರಿ ಮೇ 1 – ಮಡಿಕೇರಿಯ ಜನರಲ್ ತಿಮ್ಮಯ್ ಕ್ರೀಡಾಂಗಣದಲ್ಲಿ ಕತ್ತಲಾವರಿಸುತ್ತಿದ್ದಂತೆಯೇ ನೂರಾರು ಜನ ಮೊಬೈಲ್ ಲೈಟ್ ಬೆಳಗುತ್ತಾ ನಾನೂ ಮತ ಹಾಕುವೆ ಎಂಬ ಸಂದೇಶ ಸಾರಿದರು. ಮಳೆಯ ಸಿಂಚನದ ನಡುವೇ ಮತದಾನದ ಮಹತ್ವವನ್ನು ವಿಭಿನ್ನವಾಗಿ ಸಾರಿದ ಕಾಯ೯ಕ್ರಮ ವಿನೂತನ ರೀತಿಯಲ್ಲಿ ಗಮನ ಸೆಳೆಯಿತು.
ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್ ಸಹಯೋಗದೊಂದಿಗೆ, ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೊಬೈಲ್ ಲೈಟ್ ಬೆಳಗಿಸಿ ನಾನೂ ಮತಹಾಕುವೆ ಎಂಬ ಸಂದೇಶ ಸಾರುವ ಕಾಯ೯ಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಮಡಿಕೇರಿಯ ಜಿಲ್ಲಾ ಕ್ರೀಡಾಂಗಣವಾದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನೂರಾರು ಜನ ಸೇರಿ ,ಸಾಲಾಗಿ ನಿಗಧಿತ ಸ್ಥಳದಲ್ಲಿ ನಿಂತು ಮೊಬೈಲ್ ಲೈಟ್ ಬೆಳಗಿಸಿ ನಾನೂ ವೋಟ್ ಹಾಕುವೆ ಎಂಬ ಸಂದೇಶ ಸಾರಿದರು. ಮತದಾನದ ಮಹತ್ವದ ಕುರಿತಂತೆ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮೇ 10 ರಂದು ನಡೆಯುವ ಕನಾ೯ಟಕ ವಿಧಾನಸಭಾ ಚುನಾವಣೆಗೆ ಪ್ರತೀಯೋವ೯ರೂ ಮತದಾನ ಮಾಡುವಂತೆ ಕೋರಿದರು. ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್, ಈಗಾಗಲೇ ಕಡಮೆ ಮತದಾನದ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಈ ಚುನಾವಣೆಯಲ್ಲಿ ತಮ್ಮ ಹೊಣೆ ಅರಿತು ಪ್ರತೀಯೋವ೯ ಮತದಾರನೂ ತನ್ನ ಹಕ್ಕು ಚಲಾಯಿಸಬೇಕೆಂದು ಹೇಳಿದರು.
ಕಾಯ೯ಕ್ರಮದ ಪ್ರಯುಕ್ತ ಕುಶಾಲನಗರದ ಚಿತ್ರಕಲಾ ಶಿಕ್ಷಕ, ಕೊಡಗು ಜಿಲ್ಲಾ ಚುನಾವಣಾ ರಾಯಭಾರಿ ಬಸವರಾಜ ಬಡಿಗೇರ್ ತಂಡದಿಂದ ಹಾಡುಗಾರಿಕೆ ಆಯೋಜಿಸಲಾಗಿತ್ತು. ಬಸವರಾಜ್ ಪುತ್ರಿ ಜಿ ಟಿವಿಯ ಸರಿಗಮ ಲಿಟಲ್ ಚಾಂಪ್ ನ ವಿಜೇತೆ ಕುಶಾಲನಗರದ ಪ್ರಗತಿ ಬಡಿಗೇರ್, ಸಹೋದರಿಯರಾದ ಪ್ರತಿಕ್ಷಾ ಬಡಿಗೇರ್ ತ್ರಿವೇಣಿ ಬಡಿಗೇರ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಯುವಬಳಗದ ಶ್ರೀರಕ್ಷಾ ಪ್ರಭಾಕರ್, ಅಮೖತ್ ರಾಜ್, ಅನಿತ್ ರಾಜ್ ತಂಡದಿಂದಲೂ ಹಾಡುಗಳು ಮನಸೆಳೆದವು. ಕೊಡಗು ಚುನಾವಣಾ ರಾಯಭಾರಿಗಳಾದ ಕೆ.ರವಿಮುತ್ತಪ್ಪ, ಎಸ್.ಕೆ. ಈಶ್ವರಿ ಹಾಜರಿದ್ದು ಮತದಾನದ ಮಹತ್ವದ ಬಗ್ಗೆ ಮಾತನಾಡಿದರು.
ರಾಜ್ಯದಲ್ಲಿಯೇ ವಿನೂತನ ರೀತಿಯಲ್ಲಿ ಆಯೋಜಿತವಾಗಿದ್ದ ಈ ಕಾಯ೯ಕ್ರಮವನ್ನು ರೋಟರಿ ಸಂಸ್ಥೆಯ ಪರವಾಗಿ ಅನಿಲ್ ಎಚ್.ಟಿ. ಮಡಿಕೇರಿ ನಗರ ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ಎಂ.ಧನಂಜಯ್ ನಿವ೯ಹಿಸಿದರು. ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ರಾಜಗೋಪಾಲ್, ಸ್ವೀಪ್ ನೋಡಲ್ ಅಧಿಕಾರಿ ನವೀನ್ , ಯುವಜನ ಸೇವೆ ಮತ್ತು ಕ್ರೀಡಾ ಇಲಾಖಾಧಿಕಾರಿ ವಿಸ್ಮಯಿ, ರೋಟರಿ ಸಂಸ್ಥೆಯ ಪ್ರಮುಖರು, ಲಯನ್ಸ್ ಕ್ಲಬ್ , ಇನ್ನರ್ ವೀಲ್, ಸ್ಕೌಟ್ ಮತ್ತು ಗೈಡ್ಸ್ , ಆಟೋ ಚಾಲಕರು, ಮಾಲೀಕರ ಸಂಘ, ಆರೋಹಣ ತಂಡ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾಥಿ೯ಗಳು, ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜು ವಿದ್ಯಾಥಿ೯ಗಳು, ಕೋದಂಡ ರಾಮ ದೇವಾಲಯ ಸಮಿತಿ ಸದಸ್ಯರು, ಕೊಡವ ಮಕ್ಕಡ ಕೂಟ, ಭಾರತೀಯ ರೆಡ್ ಕ್ರಾಸ್, ಜಾನಪದ ಪರಿಷತ್, ಕನ್ನಡ ಸಾಹಿತ್ಯ ಪರಿಷತ್,ನ ಸದಸ್ಯರು ಪಾಲ್ಗೊಂಡಿದ್ದರು. ಕಾಯ೯ಕ್ರಮವನ್ನು ಪವನ್ ಕುಮಾರ್ ನಿರೂಪಿಸಿದರು. ಇದೇ ಸಂದಭ೯ ಹಾಡುಗಾರರು, ಕೊಡಗು ಚುನಾವಣಾ ರಾಯಭಾರಿಗಳನ್ನು ಸ್ವೀಪ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಐ ವೋಟ್ ಎಂಬ ಲೈಟ್ ಹಿನ್ನಲೆಯಲ್ಲಿ ಅನೇಕರು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು.