ಮಡಿಕೇರಿ ಮೇ 2 : ನಿವೇಶನದ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದ ನಿವಾಸಿಗಳು ಕಳೆದ 36 ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಅಂತ್ಯಗೊಂಡಿದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡಿರುವ ಹಿನ್ನೆಲೆ ಧರಣಿಯಿಂದ ಹಿಂದೆ ಸರಿದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರ ಸಲಹೆಯಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್, ಗ್ರಾ.ಪಂ ಅಧ್ಯಕ್ಷರಾದ ಕುಸುಮಾವತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮೊಣ್ಣಪ್ಪ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರೊಂದಿಗೆ ಸಮಾಲೋಚಿಸಿದರು.
ಚುನಾವಣೆ ಬಳಿಕ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಚುನಾವಣಾ ಬಹಿಷ್ಕಾರದ ನಿರ್ಧಾರ ಕೈಬಿಡುವಂತೆ ಮನವೊಲಿಸಿದರು.
ಧರಣಿ ನಿರತರು ಮಾತನಾಡಿ ಕಳೆದ 36 ದಿನಗಳಿಂದ 260 ಕುಟುಂಬಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಯಾರೂ ನಮ್ಮನ್ನು ತಿರುಗಿ ನೋಡಿಲ್ಲ. ಅರೆಬೆತ್ತಲೆ ಧರಣಿ ಆರಂಭಿಸಿದರೂ ನಮ್ಮ ನೋವಿಗೆ ಸ್ಪಂದನೆ ದೊರೆತ್ತಿಲ್ಲ. ಆದರೆ ಇದೀಗ ಕಾಂಗ್ರೆಸ್ ಪ್ರಮುಖರು ಭೇಟಿ ನೀಡಿ ಬೇಡಿಕೆ ಪರ ಸೂಕ್ತ ಭರವಸೆ ನೀಡಿದ್ದಾರೆ. ಆದ್ದರಿಂದ ತಾತ್ಕಾಲಿಕವಾಗಿ ಧರಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.
ಡಿಸಿಸಿ ಸದಸ್ಯ ಪುಷ್ಪ ಪೂಣಚ್ಚ, ಗ್ರಾ.ಪಂ ಸದಸ್ಯ ಹಮೀದ್, ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ರೌವೂಫ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಶ್ ದೊಳ್‍ಪಾಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ಹೊದ್ದೂರು ವಲಯಾಧ್ಯಕ್ಷ ಇಬ್ರಾಹಿಂ, ಪ್ರಮುಖರಾದ ಎಂ.ಎಸ್.ಆನಂದ, ಪಿ.ಸಿ.ಸುರೇಶ್, ಗೋವಿಂದ, ಯೂನುಸ್, ಧನಂಜಯ, ರಿಯಾಜ್, ಸುಹೇಲ್, ಭಗವಾನ್ ಮತ್ತಿತರರು ಹಾಜರಿದ್ದರು.










