ಸೋಮವಾರಪೇಟೆ ಮೇ 2 : ಯಾವುದೇ ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾಗದೇ, ಹಿಂದೂಗಳ ರಕ್ಷಣೆ ಹಾಗೂ ಏಳಿಗೆಗೆ ಶ್ರಮಿಸುತ್ತಿರುವ ಭಜರಂಗದಳವನ್ನು ನಿಷೇಧ ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಪಕ್ಷದ ಕ್ರಮ ಖಂಡನೀಯವೆoದು ಭಜರಂಗದಳದ ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜೀವನ್ ನೇಗಳ್ಳೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮಮಂದಿರ ನಿರ್ಮಾಣದ ಸಂದರ್ಭ ಮುಂಚೂಣಿಯಲ್ಲಿದ್ದ ಭಜರಂಗದಳ ರಾಷ್ಟ್ರದ 60ಸಾವಿರ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೋಹತ್ಯೆ ನಿಷೇಧ, ಮತಾಂತರ, ಲವ್‌ಜಿಹಾದ್ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ದೇಶಭಕ್ತ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿರುವ ಕಾಂಗ್ರೆಸ್ ನ್ನು ಸೋಲಿಸಿ ಹಿಂದೂಗಳ ಪರವಾಗಿರುವ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಕೊಡಗಿನಲ್ಲಿ ಪ್ರಕೃತಿವಿಕೋಪ ಸಂಭವಿಸಿದ ಸಂದರ್ಭ ಭಜರಂಗದಳ ಕಾರ್ಯಕರ್ತರು ಜೀವದ ಹಂಗುತೊರೆದು ಸಂಕಷ್ಟದಲ್ಲಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದಾರೆ. ಕೋವಿಡ್ ಸಂದರ್ಭ ಮೃತರೋಗಿಗಳ ಶವಸಂಸ್ಕಾರ ಮಾಡಿದ್ದಾರೆ. ನಿರಂತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯನ್ನು ನಿಷೇಧ ಮಾಡಲು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲವೆಂದರು. ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಭಜರಂಗದಳ ಕಾರ್ಯಕರ್ತರಾದ ಕೆ.ಟಿ.ಮಧು ಹಾಗೂ ಟಿ.ಎಸ್.ನಿಧಿ ಉಪಸ್ಥಿತರಿದ್ದರು.










