ಮಡಿಕೇರಿ ಮೇ 3 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ.ಎಸ್.ಅನಂತಕುಮಾರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಪರ ಒಲವು ತೋರಿರುವ ಅವರು ಸಧ್ಯದಲ್ಲೇ ಶನಿವಾರಸಂತೆಯಲ್ಲಿ ಶಕ್ತಿ ಪ್ರದರ್ಶನ ಮಾಡುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತಕುಮಾರ್ ಕಾಂಗ್ರೆಸ್ ಪಕ್ಷ ನನಗೆ ಅನ್ಯಾಯ ಮಾಡಿಲ್ಲ, ಆದರೆ ಪಕ್ಷದ ಜಿಲ್ಲಾಧ್ಯಕ್ಷರು, ನಾಯಕರು ಹಾಗೂ ಅಭ್ಯರ್ಥಿ ನನ್ನನ್ನು ಕಡೆಗಣಿಸಿದ್ದಾರೆ. ನನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಿರುವುದರಿಂದ ಪಕ್ಷದಿಂದ ಹೊರ ಹೋಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುತ್ತೇನೆ ಎಂದು ಹೇಳಿದರು.
ನಾನು ಜಿಲ್ಲಾ ಉಪಾಧ್ಯಕ್ಷನಾಗಿದ್ದರೂ ಕಳೆದ 6 ತಿಂಗಳುಗಳಿಂದ ಜಿಲ್ಲಾಧ್ಯಕ್ಷರು ನನಗೆ ಕರೆ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿಲ್ಲ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಸಭೆ, ಸಮಾರಂಭಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಸಂಘಟನೆ ಅತಿ ಮುಖ್ಯವಾಗಿದ್ದು, ಯಾರೂ ಕೂಡ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೃಹತ್ ಮಟ್ಟದಲ್ಲಿ ಬೆಳೆಸಿದ್ದೇನೆ. ಆದರೆ ನನ್ನ ಗಮನಕ್ಕೆ ತಾರದೆ ಇದೇ ಬೂತ್ ವ್ಯಾಪ್ತಿಯಲ್ಲಿ ಯಾರನ್ನೋ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ಇದು ನನ್ನ ಸ್ವಾಭಿಮಾನಕ್ಕೆ ದಕ್ಕೆಯುಂಟುಮಾಡಿದ್ದು, ಈ ಪ್ರಕರಣವನ್ನು ಅಭ್ಯರ್ಥಿ ಲಘುವಾಗಿ ಕಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮಾತೃಪಕ್ಷ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಸ್ವಂತ ಹಣವನ್ನು ಖರ್ಚು ಮಾಡಿ ಕಳೆದ 7 ವರ್ಷಗಳಿಂದ ಪಕ್ಷವನ್ನು ಸಂಘಟಿಸಿದ್ದೇನೆ. ಆದರೆ ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿ ಸ್ಥಳೀಯ ನಾಯಕರುಗಳು ವರ್ತಿಸುತ್ತಿದ್ದು, ಇದರಿಂದ ನಾನು ಬೇಸತ್ತಿದ್ದೇನೆ. ಬಿಜೆಪಿ ಶಾಸಕರು ಹಾಗೂ ನಾಯಕರುಗಳು ನನ್ನ ಸಂಪರ್ಕದಲ್ಲಿದ್ದು, ಮುಂದಿನ ಎರಡು ದಿನಗಳಲ್ಲಿ ಬಿಜೆಪಿ ಸೇರ್ಪಡೆ ಕುರಿತು ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಅನಂತಕುಮಾರ್ ಸ್ಪಷ್ಟಪಡಿಸಿದರು.
ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಕೆ.ಐ.ಮಹಮ್ಮದ್ ರಫೀಕ್ ಮಾತನಾಡಿ ನಾವೂ ಕೂಡ ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿದ್ದೇವೆ, ನಮ್ಮನ್ನು ಸೈಡ್ ಲೈನ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೆರಡು ದಿನಗಳಲ್ಲಿ ಪಕ್ಷದ ಪ್ರಮುಖರು ನಮ್ಮೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಸೂಚಿಸದಿದ್ದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಪಕ್ಷದ ಪ್ರಮುಖರಾದ ಷರೀಫ್ ಇಬ್ರಾಹಿಂ ಮಾತನಾಡಿ ಕಳೆದ 6-7 ತಿಂಗಳುಗಳಿಂದ ನೈಜ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಹೊರಗಿನಿಂದ ಬಂದವರಿಗೆ ಮಣೆ ಹಾಕಲಾಗುತ್ತಿದೆ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅನಂತಕುಮಾರ್ ಅವರ ಬೆಂಬಲಿಗರಾದ ಬಿ.ಜೆ.ಈರಪ್ಪ, ಕೆ.ಎಂ.ಹೂವಯ್ಯ ಹಾಗೂ ಕಿರಣ್ ಉಪಸ್ಥಿತರಿದ್ದರು.









