ಮಡಿಕೇರಿ ಮೇ 3 : ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ನಗರದ ಜಿಲ್ಲಾ ಕ್ರೀಡಂಗಣದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಮಕ್ಕಳ ಉಚಿತ ಬೇಸಿಗೆ ಶಿಬಿರ ಮುಕ್ತಾಯಗೊಂಡಿತು.
ಅತಿಥಿ ಗಣ್ಯರೊಂದಿಗೆ ಶಿಬಿರದ ಮಕ್ಕಳು, ಪೋಷಕರು, ವಾಂಡರರ್ಸ್ ಪದಾಧಿಕಾರಿಗಳು ಸಂಭ್ರಮದಿಂದ ಪಾಲ್ಗೊಂಡು ೨೯ನೇ ವರ್ಷದ ಶಿಬಿರಕ್ಕೆ ತೆರೆ ಎಳೆದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ಮಕ್ಕಳು ತಾವು ಶಿಬಿರದಲ್ಲಿ ಕಲಿತ ಪ್ರಾಣಾಯಾಮವನ್ನು ಅತಿಥಿಗಳೆದುರು ಪ್ರದರ್ಶಿಸಿ ಮೆಚ್ಚುಗೆಗಳಿಸಿದರು. ಶಿಬಿರದ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಹಾಕಿ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.
ಇದೇ ಸಂದರ್ಭ ಶಿಬಿರದ ಬಗ್ಗೆ ಶಿಬಿರಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳ ಪರವಾಗಿ ಸೃಷ್ಟಿ, ಆದ್ಯ ಹಾಗೂ ದಾರಿಕಾ, ಪೋಷಕರ ಪರವಾಗಿ ಬೊಟ್ಟೋಳಂಡ ನಿವ್ಯ ದೇವಯ್ಯ ಅನಿಸಿಕೆ ವ್ಯಕ್ತಪಡಿಸಿದರೆ, ತರಬೇತುದಾರರ ಪರವಾಗಿ ವಾಂಡರರ್ಸ್ ಆಡಳಿತಾಧಿಕಾರಿ ಬೊಪ್ಪಂಡ ಶಾಂ ಪೂಣಚ್ಚ ಮಾತನಾಡಿದರು.
ಡೆಕಾಥ್ಲಾನ್ ಚಾಂಪಿಯನ್ ಕೋದಂಡ ಪೂವಯ್ಯ ಅಪ್ಪಣ್ಣ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ಆಟವಾಡಿದ ಅನೇಕರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಸಿದ್ದಾರೆ. ೧೯೭೫ರಲ್ಲಿ ವಿಶ್ವ ಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಪೈಕೇರ ಕಾಳಯ್ಯ ಕೂಡ ಈ ಮೈದಾನದ ಕೊಡುಗೆ. ಇಲ್ಲಿ ಸಿಗುವಂತಹ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಕಲಿಸಿದವರಿಗೆ ಗೌರವ ನೀಡಬೇಕು. ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅರ್ಥ ಬರುತ್ತದೆ. ನಮ್ಮ ದೇಹವೇ ದೇಗುಲವಾಗಿದ್ದು, ದೇಹವನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ. ಕ್ರೀಡೆ ಶಿಸ್ತನ್ನು ಕಲಿಸುತ್ತದೆ, ಎಲ್ಲರೂ ಸಾಧನೆ ಮಾಡುವತ್ತ ಕನಸು ಕಾಣಬೇಕೆಂದು ಕಿವಿಮಾತು ಹೇಳಿದರು.
ಅಂತರರಾಷ್ಟ್ರೀಯ ಮಾಸ್ಟರ್ ಅಥ್ಲೆಟ್ ಪಾಲೆಕಂಡ ಬೋಪಯ್ಯ ಮಾತನಾಡಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದರಿಂದ ಶಕ್ತಿ ಬರುತ್ತದೆ. ನಂತರ ಯಾವುದೇ ಕ್ರೀಡೆಯಲ್ಲಿಯೂ ಭಾಗವಹಿಸಬಹುದು. ಅಭ್ಯಾಸ ಮಾಡಬೇಕು, ಅದು ಕ್ರಿಯಾತ್ಮಕವಾಗಿರಬೇಕು ಎಂದು ಹೇಳಿದರು.
ಪಾಲೆಕಂಡ ಬೆಳ್ಯಪ್ಪ ಮಾತನಾಡಿ ವಿದ್ಯಾರ್ಥಿಗಳು ಉತ್ತಮರ ಸಂಘ ಮಾಡಬೇಕು. ತಂದೆ ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕೆಂದು ಹೇಳಿದರು.
ಪ್ರಮುಖರಾದ ಮಾರಮಾಡ ಮಾಚಮ್ಮ ಮಕ್ಕಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಾಂಡರರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಮಾತನಾಡಿ ಶಿಬಿರಾರ್ಥಿಗಳ ಶಿಸ್ತಿನಿಂದ ಶಿಬಿರ ಯಶಸ್ವಿಯಾಗಿದೆ. ಇದಕ್ಕೆ ಮಕ್ಕಳೇ ಕಾರಣ. ಕಲಿತದ್ದನ್ನು ಇಲ್ಲಿಗೆ ನಿಲ್ಲಿಸಬೇಡಿ, ಇನ್ನು ಮುಂದಕ್ಕೂ ಎಲ್ಲ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಪತ್ನಿ ರೂಪಾ ಸುರೇಶ್, ವಾಂಡರರ್ಸ್ ಮಾಜಿ ಅಧ್ಯಕ್ಷ ಮಣಿ ಮೇದಪ್ಪ, ಪದಾಧಿಕಾರಿಗಳಾದ ಕಾರೇರ ಕವನ್ ಮಾದಪ್ಪ, ನಂದಾ ನಂಜಪ್ಪ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕೋದಂಡ ಪೂವಯ್ಯ ಅಪ್ಪಣ್ಣ, ಪಾಲೆಕಂಡ ಬೋಪಯ್ಯ, ಬೆಳ್ಯಪ್ಪ, ಮಾರಮಾಡ ಮಾಚಮ್ಮ ಹಾಗೂ ಕೋಟೆರ ಮುದ್ದಯ್ಯ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ತರಬೇತುದಾರರುಗಳಾದ ಎಸ್.ಟಿ.ವೆಂಕಟೇಶ್, ಶಾಂ ಪೂಣಚ್ಚ, ಕಿರುಂದಂಡ ಗಣೇಶ್, ಕುಡೆಕಲ್ ಸಂತೋಷ್, ಯೋಗೇಶ್ ನಾಯ್ಡು, ಕಿರಣ್ ಚಿಣ್ಣಪ್ಪ, ಹರೇಂದ್ರ, ಯೋಗಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್, ಉಪಾಹಾರದ ವ್ಯವಸ್ಥೆ ಮಾಡಿಕೊಡುತ್ತಿದ್ದ ಜನಾರ್ಧನ ಅವರುಗಳನ್ನು ಉಡುಗೊರೆಯೊಂದಿಗೆ ಅಭಿನಂದಿಸಲಾಯಿತು.
ಶಿಬಿರಾರ್ಥಿಗಳಾದ ಆರ್ಯ, ಲಕ್ಷಿತಾ, ಸಿಂಚನಾ, ದ್ಯುತಿ ಅತಿಥಿಗಳನ್ನು ಪರಿಚಯಿಸಿದರು. ದಾರಿಕಾ, ಲಕ್ಷಿತಾ, ಸ್ನೇಹ, ನಿಧಿ ಹಾಗೂ ಜನ್ಯಶ್ರೀ ಪ್ರಾರ್ಥಿಸಿದರೆ, ಎಸ್.ಟಿ.ವೆಂಕಟೇಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಎಲ್ಲರಿಗೂ ಹಾಲು, ಮೊಟ್ಟೆ, ಬ್ರೆಡ್ ಜಾಮ್, ಬಾಳೆ ಹಣ್ಣು ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.







