ಮಡಿಕೇರಿ ಮೇ 3 : ನಗರದ ಮಲ್ಲಿಕಾರ್ಜುನ ಬಡಾವಣೆಯ ನವೀಕೃತಗೊಂಡಿರುವ ಶ್ರೀ ಕೋದಂಡ ರಾಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, ಇಂದು ನಗರದಲ್ಲಿ ವೈಭವದ ಧಾರ್ಮಿಕ ಮೆರವಣಿಗೆ ನಡೆಯಿತು.
ವೇದಬ್ರಹ್ಮ ಶ್ರೀಕೃಷ್ಣ ಉಪಾಧ್ಯ ಹಾಗೂ ವಿದ್ವಾನ್ ಕೆ.ಶ್ರೀನಿವಾಸ ಉಪಾಧ್ಯ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗುತ್ತಿದ್ದು, ಮೇ2 ರ ಸಂಜೆಯಿAದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಂಡವು.
ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನ ಕಲಶ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊಂದಿಗೆ ಧಾರ್ಮಿಕ ಮೆರವಣಿಗೆ ನಗರದ ಮುಖ್ಯ ರಸ್ತೆಯಲ್ಲಿ ನಡೆಯಿತು.
ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ಹಾಗೂ ಶ್ರೀ ಕೋದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಹೆಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಎಸ್.ಎಸ್., ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಧಾಕರ್ ಹೆಚ್.ವಿ., ಖಜಾಂಚಿ ತಿಮ್ಮಯ್ಯ ಹೆಚ್.ಎನ್., ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಂಜುಂಡ ಹೆಚ್.ಎನ್., ಖಜಾಂಚಿ ಕುಶಾಲ್ ಎಸ್., ಸ್ವಾಗತ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಮತ್ತಿತರ ಪ್ರಮುಖರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು.
ಮೇ 4 ರಂದು ಬೆಳಗ್ಗೆ 6 ಗಂಟೆಯಿಂದ ದೇವಾಲಯದ ಆವರಣದಲ್ಲಿ ವಿವಿಧ ಹೋಮ ಹವನಾದಿ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದ್ದು, ಬೆಳಿಗ್ಗೆ 7.45ಕ್ಕೆ ಶ್ರೀ ದೇವರ ಪ್ರತಿಷ್ಠಾಪನೆ ಜರುಗಲಿದೆ. ಬೆಳಿಗ್ಗೆ 10.5 ಕ್ಕೆ ಬ್ರಹ್ಮ ಕುಂಭಾಭಿಷೇಕ ನೆರವೇರಲಿದ್ದು, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಮತ್ತು ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.










