ಮಡಿಕೇರಿ ಮೇ 3 : ಕರ್ನಾಟಕ ರಾಜ್ಯದಲ್ಲಿ ಪೂರ್ಣ ಬಹುಮತದ ಭಾರತೀಯ ಜನತಾ ಪಾರ್ಟಿಯ ಸರಕಾರ ಅಧಿಕಾರಕ್ಕೆ ಬರಬೇಕೆಂದು ಜನತೆ ಬಯಸಿದ್ದು, ಈ ಚುನಾವಣೆಯಲ್ಲಿ ಪಕ್ಷ 125 ರಿಂದ 130 ಸ್ಥಾನಗಳನ್ನು ಪಡೆಯುವುದು ಖಚಿತವೆಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಸರ್ಕಾರ, ತನ್ನ ಆಡಳಿತಾವಧಿಯಲ್ಲಿ ಜನಪರವಾದ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಿದೆಯೆಂದು ತಿಳಿಸಿದರು.
ರಾಜ್ಯದ ಬಿಜೆಪಿ ಸರ್ಕಾರ ಸಮಾಜದ ವಿವಿಧ ಸ್ತರಗಳ ಜನರ ಪ್ರಗತಿಗಾಗಿ ಹತ್ತಾರು ಪ್ಯಾಕೇಜ್‌ಗಳನ್ನು ವಿವಿಧ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರ ನೀಡಿದೆ. ಕೋವಿಡ್ ಕಾಲದಲ್ಲಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದರು.
ಮಡಿಕೇರಿ ಕ್ಷೇತ್ರದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಕ್ಷೇತ್ರದ ಕೆ.ಜಿ.ಬೋಪಯ್ಯ ಅವರು ಚುನಾವಣೆಯಲ್ಲಿ ನಿಚ್ಚಳ ಬಹುಮತದೊಂದಿಗೆ ನಿರಾಯಾಸ ಗೆಲುವನ್ನು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ತೊರೆದಿರುವ ಬಿ.ಎ.ಜೀವಿಜಯ ಅವರ ಈಗಿನ ನಡೆ ಸ್ವಾಗತಾರ್ಹ. ಈಗಲಾದರು ಅವರಿಗೆ ತಮ್ಮ ತಪ್ಪಿನ ಅರಿವಾಗಿದೆಯಲ್ಲ ಎಂದು ಸದಾನಂದಗೌಡ ಹೇಳಿದರು.










