ಮಡಿಕೇರಿ ಮೇ 4 : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರಗತಿಯಲ್ಲಿ ವಿಶ್ವದ ಗಮನ ಸೆಳೆದಿದೆ. ಮೋದಿ ನಾಯಕತ್ವದ ಭಾರತವನ್ನು ಇಡೀ ಜಗತ್ತೇ ತಿರುಗಿ ನೋಡುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಬಿಳಿಗೇರಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತಾನಾಡಿದ ಅವರು ಶ್ರೀಲಂಕಾ, ಪಾಕಿಸ್ತಾನದಲ್ಲಿರುವ ಪರಿಸ್ಥಿತಿ ನಮಗೆಲ್ಲಾ ಗೊತ್ತೇ ಇದೆ. ಪಾಕಿಸ್ತಾನದಲ್ಲಿ ಗುಂಡು ಹಾರಿಸಿ ಕೊಂದು, ಜನರನ್ನು ನಿಯಂತ್ರಿಸಿ ಆಹಾರವನ್ನು ವಿತರಿಸುವ ಪರಿಸ್ಥಿತಿ ಇದೆ. ಶ್ರೀಲಂಕಾದಲ್ಲಿ ಅಡುಗೆ ಮಾಡಲೂ ಅನಿಲ ಸಿಗುತ್ತಿಲ್ಲ. ಜನ ದಂಗೆ ಎದ್ದು, ಅಧ್ಯಕ್ಷರೇ ದೇಶ ಬಿಟ್ಟು ಹೋಗಬೇಕಾಯಿತು. ಆದರೆ ದೇಶದಲ್ಲಿ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಕಡಿಮೆ ಬೆಲೆಗೆ ಸಿಗುತ್ತಿದೆ; ಕರ್ನಾಟಕದಲ್ಲಿ ದಕ್ಷಿಣದ ಇತರ ರಾಜ್ಯಗಳಿಗಿಂತ ತೈಲ ಬೆಲೆ ಕಡಿಮೆ ಇದೆ ಎಂದರು.
ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಮುಂದುವೆರೆದ ರಾಷ್ಟ್ರಗಳಲ್ಲಿ ಒಂದಾಗುವತ್ತ ಮುನ್ನುಗ್ಗುತ್ತಿದೆ. ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ. ಕಾಂಗ್ರೆಸ್ ಸರ್ಕಾರಗಳು 60 ವರ್ಷಗಳಲ್ಲಿ ಸಾಧಿಸದನ್ನು ಬಿಜೆಪಿ ಸರ್ಕಾರ ಕೇವಲ 10 ವರ್ಷಗಳಲ್ಲಿ ಸಾಧಿಸಿದೆ ಎಂದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದು ನೂರಕ್ಕೆ ನೂರರಷ್ಟು ಸತ್ಯ ಎಂದ ಅಪ್ಪಚ್ಚು ರಂಜನ್, ‘ಡಬಲ್ ಇಂಜಿನ್’ ಸರ್ಕಾರ ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದರು.
ಕಿರಗಂದೂರು, ತಾಕೇರಿ, ಶಾಂತಳ್ಳಿ, ಚೌಡ್ಲು ಪ್ರದೇಶಗಳಲ್ಲಿ ಅಪ್ಪಚ್ಚು ರಂಜನ್ ಬಿರುಸಿನ ಪ್ರಚಾರ ನಡೆಸಿದರು.