ಮಡಿಕೇರಿ ಮೇ 4 : ನರೇಂದ್ರ ಮೋದಿ ಅವರು ಈ ರಾಷ್ಟ್ರದ ಪ್ರಧಾನಿಯಾಗಿದ್ದು, ಅವರನ್ನು ಗೌರವಿಸುತ್ತೇನೆ. ಆದರೆ ಅವರ ಮನಸು ಬದಲಾವಣೆಯಾಗಬೇಕು, ಭಾರತದಷ್ಟು ವಿಶಾಲವಾಗಬೇಕು. ಇಂದು ರಾಜ್ಯಕ್ಕೆ ಪದೇ ಪದೇ ಬರುತ್ತಿರುವ ಮೋದಿ ಅವರು, ಮುಚ್ಚುವ ಸ್ಥಿತಿಯಲ್ಲಿರುವ 6 ಸಾವಿರ ಸರ್ಕಾರಿ ಶಾಲೆಗಳು, ಏಕೋಪಾಧ್ಯಾಯ ಇರುವ ಒಂದು ಸಾವಿರ ಪ್ರೌಢ ಶಾಲೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಚುನಾವಣೆಯ ಬಗೆಗಿನ ಹೆದರಿಕೆಯಿಂದ ಮೋದಿ ಅವರು ರಾಜ್ಯಕ್ಕೆ ಬರುತ್ತಿದ್ದಾರೆಯೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
::: ಗಲ್ಲ್ಲಿ ಗಲ್ಲಿಗೆ ಬಂದಿಲ್ಲ :::
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಪದೇ ಪದೇ ಇಂದು ಭೇಟಿ ನೀಡುತ್ತಿದ್ದು, ಈ ಅವಧಿಯಲ್ಲಿ ಅವರು ಅನ್ನ, ಅಕ್ಷರ, ಆರೋಗ್ಯ, ಉದ್ಯೋಗ, ಆರ್ಥಿಕ ನೀತಿಗಳ ಬಗ್ಗೆ ಮಾತನಾಡಿಲ್ಲ. ರಾಷ್ಟçದ ಪ್ರಧಾನಿಗಳಾಗಿದ್ದವರಲ್ಲಿ ಯಾರೊಬ್ಬರು ಈ ರೀತಿ ಗಲ್ಲಿ ಗಲ್ಲಿಗೆ ಬಂದಿಲ್ಲವೆಂದು ಟೀಕಿಸಿದರು.
ಚುನಾವಣಾ ಹಂತದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಕುರಿತು ಮಾತನಾಡುವುದಕ್ಕಿಂತ ಉಚಿತ ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾತನಾಡಬೇಕು. ವಿವಿಧ ಕೊಡುಗೆಗಳನ್ನು ಉಚಿತವಾಗಿ ನೀಡಲು ಹಣ ಎಲ್ಲಿದೆ ಪ್ರಶ್ನಿಸಿದರು.
ಚುನಾವಣಾ ಹಂತದಲ್ಲಿ ಎಲ್ಲಾ ಪಕ್ಷಗಳು ಉಚಿತ ಕೊಡುಗೆಗಳ ಬಗ್ಗೆ ಮಾತನಾಡಿವೆ. ಇವುಗಳನ್ನು ಕಾರ್ಯಗತಗೊಳಿಸಲು ಹಣವೆಲ್ಲಿದೆಯೆಂದು ಪ್ರಶ್ನಿಸಿದ ಅವರು, ಬೊಮ್ಮಾಯಿ ಅವರು ತಾವು 3.17 ಲಕ್ಷ ಕೋಟಿಯ ಬಜೆಟ್ ತಮ್ಮದೆಂದು ಹೇಳಿಕೊಳ್ಳುತ್ತಾರೆ. ಇದರಲ್ಲಿ 1.76 ಲಕ್ಷ ಕೋಟಿ ವೇತನಕ್ಕೆ ಬಳಕೆಯಾಗಿ ಹೋಗುತ್ತದೆ, ಇದರ ಮೇಲೆ 7 ಸಾವಿರ ಕೋಟಿ ಸಾಲವಿದ್ದು, ಉಚಿತ ಕೊಡುಗೆಗಳಿಗೆ ಹಣವೆಲ್ಲಿದೆಯೆಂದು ಪ್ರಶ್ನಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಂದು ತಾನು ನಾಮ ನಿರ್ದೇಶಿತ ವಿಧಾನ ಪರಿಷತ್‌ನ ಸದಸ್ಯನಾಗಿದ್ದು, ಯಾವುದೇ ಪಕ್ಷದಲ್ಲಿ ಇಲ್ಲದ ಸ್ವತಂತ್ರ ವ್ಯಕ್ತಿಯಾಗಿದ್ದೇನೆ ಮತ್ತು ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದೇನೆ ಎಂದರು.
ಪ್ರಜಾತಂತ್ರ ವ್ಯವಸ್ಥೆಯಡಿ ಯಾರು ಯಾವುದೇ ಪಕ್ಷದಲ್ಲಿರಲು ಅವಕಾಶವಿದೆ. ಅದರಂತೆ ತಾನು ವಿವಿಧ ಪಕ್ಷಗಳಲ್ಲಿ ಇದ್ದೆನಾದರು, ಆ ಎಲ್ಲಾ ಪಕ್ಷಗಳಲ್ಲಿ ತನ್ನ ಅನಿಸಿಕೆಗಳನ್ನು ದಿಟ್ಟವಾಗಿ ಮುಂದಿಟ್ಟಿದ್ದೇನೆ. ತನ್ನ ಚಿಂತನೆಗಳಿಗೆ ಸರಿ ಹೊಂದಲಿಲ್ಲ ಎನ್ನುವ ಕಾರಣಕ್ಕಾಗಿ ಆಯಾ ಪಕ್ಷಗಳಿಂದ ಹೊರ ಹೋಗಿದ್ದೇನೆಂದು ಸ್ಪಷ್ಟಪಡಿಸಿದರು.
::: ಮುಸ್ಲಿಮರಿಗೇಕೆ ಟಿಕೆಟ್ ನೀಡಿಲ್ಲ :::
ರಾಷ್ಟ್ರದ ಸಂವಿಧಾನ, ಅದನ್ನು ರಚಿಸಿದ ಡಾ.ಅಂಬೇಡ್ಕರ್ ಅವರನ್ನು ಗೌರವಿಸುವುದಾಗಿ ಹೇಳಿಕೊಳ್ಳುವ ಬಿಜೆಪಿ, ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮೂಹದ ಮುಸ್ಲಿಮರಿಗೆ ಯಾಕೆ ಟಿಕೆಟ್ ನೀಡಿಲ್ಲವೆಂದು ವಿಶ್ವನಾಥ್ ಪ್ರಶ್ನಿಸಿದರು.
::: ಭಜರಂಗದಳ ಮತ್ತು ಆಂಜನೇಯ ಬೇರೆ ಬೇರೆ :::
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಅಂಶ ಪ್ರಸ್ತಾಪಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ಭಜರಂಗದಳ ಮತ್ತು ಆಂಜನೇಯ ಬೇರೆ ಬೇರೆ. ಭಜರಂಗದಳ ಎನ್ನುವುದು ಒಂದು ಸಂಘಟನೆ, ಈ ಸಂಘಟನೆ ನೈತಿಕ ಪೊಲೀಸ್ ಗಿರಿಯಲ್ಲಿ ನಿರತವಾದ ಸಂಘಟನೆಯೆಂದು ಆರೋಪಿಸಿದರು.
::: ಮೀಸಲಾತಿಯನ್ನು ಹಳ್ಳ ಹಿಡಿಸಲಾಗಿದೆ :::
ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಹಳ್ಳ ಹಿಡಿಸಿದೆಯೆಂದು ಟೀಕಿಸಿದ ವಿಶ್ವನಾಥ್, ಯಾವುದೇ ಮೀಸಲಾತಿಯನ್ನು ಒದಗಿಸುವುದಕ್ಕೂ ಮೊದಲು ಅದರ ಅಧ್ಯಯನಕ್ಕೆ ಆಯೋಗ ರಚನೆಯಾಗಬೇಕು. ಅದು ನೀಡುವ ವರದಿಯಂತೆ ಮೀಸಲಾತಿಗೆ ಕ್ರಮ ಕೈಗೊಳ್ಳಬೇಕು. ಅದಾವುದನ್ನು ಮಾಡದ ಸರ್ಕಾರ ಒಟ್ಟು ಮೀಸಲಾತಿಯನ್ನು ಹಳ್ಳ ಹಿಡಿಸಿದೆಯೆಂದು ಲೇವಡಿ ಮಾಡಿದರು.
ಪ್ರಸ್ತುತ ಚುನಾವಣೆಯಲ್ಲಿ ಸುಧಾರಣೆಗೋಸ್ಕರ ಜನತೆ ಬದಲಾವಣೆಯನ್ನು ಬಯಸಿದ್ದಾರೆ ಎಂದು ತಿಳಿಸಿದ ಅವರು, ಕೊಡಗಿನ ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರನ್ನು ಜಿಲ್ಲೆಯ ಜನತೆ ಗೆಲ್ಲಿಸುವ ಮೂಲಕ ಹೊಸ ಗಾಳಿ ಬೀಸಲಿ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ, ಕೊಡಗಿನಲ್ಲಿ ರಾಜಕೀಯ ಬದಲಾವಣೆಯ ತಂಗಾಳಿ ಬೀಸುತ್ತಿದೆ. ಸುದೀರ್ಘ ಆಡಳಿತ ನಡೆಸಿದವರಿಗೆ ವಿರಾಮ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ರಾಜ್ಯ ಉಪಾಧ್ಯಕ್ಷ ಪಿ.ಸಿ.ಹಸೈನಾರ್ ಹಾಗೂ ಪ್ರಮುಖರಾದ ಕೆ.ಎಂ.ಲೋಕೇಶ್ ಉಪಸ್ಥಿತರಿದ್ದರು.
Breaking News
- *ಮಡಿಕೇರಿಯಲ್ಲಿ ಪರಾಕ್ರಮ್ ದಿವಸ್ ಆಚರಣೆ : ಪರೀಕ್ಷಾ ಪೇ ಚರ್ಚಾ 9ನೇ ಆವೃತ್ತಿ*
- *ಕಳೆದು ಹೋಗಿದೆ*
- *ಫೆ.27 ಮತ್ತು 28 ರಂದು ಕೊಡವ ಬಲ್ಯನಮ್ಮೆ : ವಿವಿಧ ಸ್ಪರ್ಧೆಗಳಿಗೆ ಆಹ್ವಾನ*
- *ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*