ನಾಪೋಕ್ಲು ಮೇ 5 : ನೆಲಜಿ ಗ್ರಾಮದ ಶ್ರೀ ಇಗುತ್ತಪ್ಪ ದೇವರ ಭಕ್ತ ಜನ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಭಕ್ತ ಜನಸಂಘದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ ನಡೆಯಿತು.
ನಂತರ ನಡೆದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪುಚ್ಚಿಮಾಡ ಡಾ.ಸಂತೋಷ್, ಗ್ರಾಮದ ಕ್ರೀಡಾಕೂಟಗಳು, ದೇವಾಲಯದ ಆಚರಣೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಇಳಿಮುಖಗೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕೇವಲ ಹಿರಿಯರೇ ಸಾಮುದಾಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿದೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ಬಂದು ಸಹಕರಿಸಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಮುಕ್ಕಾಟಿರ ಎಂ. ವಿನಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿನ ಎಲ್ಲಾ ಭಕ್ತಾದಿ ಬಂಧುಗಳ ಸಹಕಾರ ಸಮಿತಿ ಸದಸ್ಯರ ಸಕ್ರಿಯತೆ, ತಕ್ಕ ಮುಖ್ಯಸ್ಥರು ಹಾಗೂ ಹಿರಿಯರ ಸಹಕಾರದಿಂದ ಮಾತ್ರ ಭಕ್ತ ಜನ ಸಂಘದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಊರಿನ ಯುವಕರು ದೇವರ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಣವಟ್ಟಿರ ಎಂ.ಚಂಗಪ್ಪ, ತಕ್ಕ ಮುಖ್ಯಸ್ಥರಾದ ಬದನಜಟ್ಟಿರ ಬಿ ನಾಣಯ್ಯ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ, ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ತಕ್ಕ ಮುಖ್ಯಸ್ಥರಾದ ನಾಪನೆರವಂಡ ಸಿ.ಪೊನ್ನಪ್ಪ, ಬಾಳಿಯಡ ಕುಣ್ಯಪ್ಪ, ಕಾರ್ಯದರ್ಶಿ ಮಾಳೆಯಂಡ ಸಿ.ಈರಪ್ಪ, ಸದಸ್ಯರಾದ ಅಪ್ಪು ಮಣಿಯಂಡ ಎಂ.ನವೀನ್, ಬಾಳಿಯಡ ಬೆಳ್ಳಿಯಪ್ಪ, ಚೀಯಕಪೂವಂಡ ಸುಜಾ ಪೆಮ್ಮಯ್ಯ, ಮಂಡಿರ ಧನುದೇವಯ್ಯ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿದರು. ಖಜಾಂಜಿ ಎ.ತಿಮ್ಮಯ್ಯ ಸಂಘದ ವರದಿ ವಾಚಿಸಿದರು, ಭಕ್ತ ಸಮಾರಾಧನೆ ಉತ್ಸವದಲ್ಲಿ ವಿವಿಧ ಪೂಜಾ ಕೈಗಳು ನೆರವೇರಿ 35 ತುಲಾಭಾರ ಸೇವೆ ನಡೆಯಿತು. ಹರಕೆಯ ರೂಪದಲ್ಲಿ ಕಾಫಿ, ಒಳ್ಳೆ ಮೆಣಸು, ದೀಪದ ಎಣ್ಣೆ ಸಮರ್ಪಿಸಿದರು.
ಮಧ್ಯಾಹ್ನ ವಿಶೇಷ ಮಹಾಪೂಜೆ ಜರುಗಿತು. ತೀರ್ಥ ಪ್ರಸಾದ ವಿತರಣೆಯ ನಂತರ ದೇವರ ನೃತ್ಯ ಬಲಿ ನೆರವೇರಿ, ಸಮಾರಾಧನೆ ಉತ್ಸವದ ಸಂಪನ್ನಗೊಂಡಿತು.
ವರದಿ : ದುಗ್ಗಳ ಸದಾನಂದ.