ಮಡಿಕೇರಿ ಮೇ 5 : ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮೇ 6 ರಂದು ಬೆಳಗ್ಗೆ 10 ಗಂಟೆಗೆ ಬಾಳೆಲೆ ಬಳಿಯ ಕಾರ್ಮಾಡು ಗ್ರಾಮದಲ್ಲಿ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಿನಿ ವಿಮಾನಗಳ ಹಾರಾಟ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ ಎಂದು ಜಿ.ಪಂ.ಸಿಇಒ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
ಮೇ, 6 ರಂದು ಬೆಳಗ್ಗೆ 10 ಗಂಟೆಗೆ ಬಾಳೆಲೆ ಕಾರ್ಮಾಡು ಗ್ರಾಮದ ಕೊಳ್ಳಿಮಾಡ ರಾಜಿ ಗಣಪತಿ ಮತ್ತು ತಂಡದಿಂದ ಗ್ರಾಮದ ಖಾಸಗಿ ಏರ್‍ಸ್ಟ್ರಿಪ್‍ನಲ್ಲಿ 30 ಕ್ಕೂ ಅಧಿಕ ಮಿನಿ ವಿಮಾನಗಳ ಪ್ರದರ್ಶನ ಮತ್ತು ಹಾರಾಟ ಕಾರ್ಯಕ್ರಮ ನಡೆಯಲಿದೆ. ಯುವ ಮತದಾರರು, ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಈ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಿನಿ ವಿಮಾನಗಳ ಹಾರಾಟದ ಪ್ರದರ್ಶನ ವೀಕ್ಷಿಸಿ ಮತದಾನ ಮಹತ್ವದ ಸಂದೇಶವನ್ನು ಎಲ್ಲೆಡೆ ಸಾರುವಂತೆ ಡಾ.ಆಕಾಶ್ ಅವರು ಕೋರಿದ್ದಾರೆ.









