ಮಡಿಕೇರಿ ಮೇ 5 : ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಚುನಾವಣಾ ರಾಜಕೀಯ ಜಾಹೀರಾತು ಸಂಬಂಧಿಸಿದಂತೆ ಪೂರ್ವಾನುಮತಿ ಪಡೆದು ಪ್ರಕಟಿಸಲಾಗುತ್ತಿದೆ.
ಮುಂದುವರೆದು ವಿಧಾನಸಭಾ ಚುನಾವಣೆಯ ಮತದಾನವು ಮೇ 10 ರಂದು ನಡೆಯಲಿದ್ದು, ಈ ಹಿನ್ನೆಲೆ ಚುನಾವಣಾ ಆಯೋಗವು ಕೆಲವು ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಮೇ 9 ಹಾಗೂ 10 ರಂದು ಅಭ್ಯರ್ಥಿಗಳು/ ಸಂಸ್ಥೆಗಳು ಅಥವಾ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ‘ಚುನಾವಣಾ ರಾಜಕೀಯ ಜಾಹೀರಾತು’ ಪ್ರಕಟಿಸಬೇಕಾದರೆ ಜಾಹೀರಾತಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ) ವತಿಯಿಂದ ಮುಂಚಿತವಾಗಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ಚುನಾವಣಾ ರಾಜಕೀಯ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಮೇ 9 ಹಾಗೂ 10 ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ, ಸಂಬಂಧಿಸಿದ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮೇ, 7 ರೊಳಗೆ ಜಿಲ್ಲಾ ಮಟ್ಟದ ಎಂಸಿಎಂಸಿ ಗೆ ಅರ್ಜಿ ಸಲ್ಲಿಸಬೇಕು.
ವಿದ್ಯುನ್ಮಾನ ಮಾಧ್ಯಮಗಳಿಗೆ ಮಾರ್ಗಸೂಚಿ: ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮೊದಲು ಸ್ಥಳೀಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ (ಟಿವಿ, ಸಿನಿಮಾಟೋಗ್ರಾಫ್, ದೃಶ್ಯಶ್ರವಣ ರಾಜಕೀಯ ಪ್ರೇರಿತ ಸಿನಿಮಾ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ-1951 ರ ಕಲಂ 126 ರ ಪ್ರಕಾರ ನಿಷೇಧಿಸಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನವು ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಆದ್ದರಿಂದ ಎಲ್ಲಾ ಸ್ಥಳೀಯ ವಿದ್ಯುನ್ಮಾನ ಮಾಧ್ಯಮಗಳು ಮೇ 8 ರ ಸಂಜೆ 6 ಗಂಟೆಯಿಂದ ಮೇ 10 ರ ಸಂಜೆ 6.30 ಗಂಟೆವರೆಗೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









