ಮಡಿಕೇರಿ ಮೇ 9 : ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಕೊಡಗಿನ ಜಿಲ್ಲಾ ಕೇಂದ್ರ್ರ ಮಡಿಕೇರಿಯಲ್ಲಿ ಸಂತೆಯ ದಿನವಾದ ಇಂದು ಜಾತ್ಯತೀತ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳಿಂದ ರೋಡ್ ಶೋ ಮತ್ತು ಬೈಕ್ ಜಾಥದ ಮೂಲಕ ಮತದಾರರ ಬಳಿ ಸಾಗುವ ಪ್ರಯತ್ನ ನಡೆಯಿತು.
ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಅವರ ನೇತೃತ್ವದಲ್ಲಿ, ನೂರಾರು ಕಾರ್ಯಕರ್ತರೊಂದಿಗೆ ನಗರದ ಎ.ವಿ.ಶಾಲೆಯ ಬಳಿಯಿಂದ ನಗರದ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಭರ್ಜರಿ ಮತಯಾಚನೆ ನಡೆಸಿದರು.
ಶುಕ್ರವಾರದ ಸಂತೆಗೆಂದು ಮಡಿಕೇರಿ ಸುತ್ತಮುತ್ತಲಿನಿಂದ ಆಗಮಿಸಿದ್ದ ಗ್ರಾಮೀಣರು, ನಗರದ ನಿವಾಸಿಗಳನ್ನು ಸಂಪರ್ಕಿಸಿದ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ್ತು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು, ಪಕ್ಷದ ಕರಪತ್ರವನ್ನು ನೀಡಿ ‘ ಬದಲಾವಣೆಗಾಗಿ ಜೆಡಿಎಸ್ ಬೆಂಬಲಿಸಿ’ ಎಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ನಿಂದ ಬೈಕ್ ರ್ಯಾಲಿ : ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ನೂರಾರು ದ್ವಿಚಕ್ರವಾಹನದಲ್ಲಿ ಪಕ್ಷದ ಧ್ವಜದೊಂದಿಗೆ ರ್ಯಾಲಿ ನಡೆಸುವ ಮೂಲಕ ಗಮನ ಸೆಳೆದರು.
ಬಹಿರಂಗ ಮತಯಾಚನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಮತದಾರರ ಓಲೈಕೆಯ ತಮ್ಮ ಪ್ರಯತ್ನವನ್ನು ತೀವ್ರ ಗೊಳಿಸಿದ್ದು, ಪಟ್ಟಣ ಪ್ರದೇಶಗಳಲ್ಲಿ ರ್ಯಾಲಿಗಳು ನಡೆಯುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ.