ಮಡಿಕೇರಿ ಅ.24 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಭೆಯು ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನವೆಂಬರ್ ತಿಂಗಳಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಹಾಗೂ ಸಂತೋಷ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಸಂತೋಷ ಕೂಟದ ಅಂಗವಾಗಿ ಸದಸ್ಯರಿಗೆ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಮಿತಿಗಳನ್ನು ರಚಿಸಲಾಯಿತು.
ಕಾಲೇಜಿನ ಕೆಲವು ಕಟ್ಟಡದ ಭಾಗಗಳು ಕುಸಿಯುವ ಹಂತದಲ್ಲಿರುವುದರಿಂದ ಅವುಗಳ ದುರಸ್ತಿಗೆ ಸಂಬಂಧಿಸಿದಂತೆ ಸಂಸದರು ಹಾಗೂ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿಯೋಗ ತೆರಳಲು ಸಭೆ ನಿರ್ಧರಿಸಿತು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ರಾಜಕೀಯ ಮುಖಂಡರು ಹಾಗೂ ಪತ್ರಿಕಾ ಮಾಧ್ಯಮಗಳ ಸಹಕಾರ ಪಡೆಯುವ ಬಗ್ಗೆಯೂ ಚರ್ಚಿಸಲಾಯಿತು. ದಾನಿಗಳ ಸಹಕಾರದೊಂದಿಗೆ ಕಾಲೇಜಿನ ಮೈದಾನದ ಸುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಉಪನ್ಯಾಸಕರಿಗೆ ಹಾಗೂ ಎಸ್ಸಿಸಿ, ಎನ್ಎಸ್ಎಸ್, ಕ್ರೀಡೆ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಬಗ್ಗೆಯೂ ಚರ್ಚಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ ಮಾತನಾಡಿ, ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಅಲ್ಲದೆ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಬೊಟ್ಟಂಗಡ ಗಣಪತಿ, ನಿರ್ದೇಶಕರುಗಳಾದ ಚೀಯಕಪೂವಂಡ ಸಚಿನ್ ಪೂವಯ್ಯ, ಐಚಂಡ ರಶ್ಮಿ ಮೇದಪ್ಪ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಬಿ.ಜಿ.ಹರ್ಷಿತ್, ಎಸ್.ಆರ್.ವತ್ಸಲಾ, ಲೋಹಿತ್ ಮಾಗಲು, ಆದರ್ಶ್ ಅದ್ಕಲೆಗಾರ್, ಆಪಾಡಂಡ ಜಾನ್ಸಿ ಗಣಪತಿ, ಕರವಂಡ ಸೀಮಾ ಗಣಪತಿ, ತೆನ್ನೀರಾ ಟೀನಾ ಚಂಗಪ್ಪ ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಸ್ವಾಗತಿಸಿದರು, ನಿರ್ದೇಶಕರಾದ ಕಿಶೋರ್ ರೈ ವಂದಿಸಿದರು.


















