ಮಡಿಕೇರಿ ಮೇ 5 : ‘ಇದು ನನ್ನ ಕೊನೇ ಚುನಾವಣೆಯಾಗಿದ್ದು, ಮುಂದಿನ ಸಲ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುತ್ತದೆ’ ಎಂದು ಐದು ಬಾರಿಯ ಶಾಸಕ, ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸುತ್ತಲೆ, ತಮ್ಮ ಪಕ್ಕದಲ್ಲೆ ಕುಳಿತಿದ್ದ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಹಾಗೂ ಈ ಬಾರಿಯ ಚುನಾವಣಾ ಆಕಾಂಕ್ಷಿಯೂ ಆಗಿದ್ದ ಬಿ.ಬಿ. ಭಾರತೀಶ್‍ರತ್ತ ಅರ್ಥಗರ್ಭಿತ ನೋಟ ಬೀರುವ ಮೂಲಕ ಮುಂದಿನ ಚುನಾವಣೆಯ ಸ್ಪರ್ಧಿ ಯಾರಾಗಬಹುದೆನ್ನುವ ಬಗ್ಗೆ ಮೌನವಾಗಿಯೇ ಉತ್ತರ ನೀಡಿದಂತೆ ಕಂಡು ಬಂದಿತು.
ಕಾಂಗ್ರೆಸ್ ತೊರೆದಿರುವ ಜೀವಿಜಯ ತನಗೆ ಬೆಂಬಲ ನೀಡುವ ವಿಶ್ವಾಸವಿದೆ. ಕಾಂಗ್ರೆಸ್ ಉಪಾಧ್ಯಕ್ಷ ಅನಂತ ಕುಮಾರ್ ಬಿಜೆಪಿಗೆ ತನ್ನ ಅಪಾರ ಬೆಂಬಲಿಗರೊಂದಿಗೆ ಸೇರಲಿರುವುದು ಮತ್ತಷ್ಟು ಬಲ ನೀಡಲಿದೆ ಎಂದೂ ರಂಜನ್ ನುಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿಜೆಪಿಗೆ?- ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾಗಿದವರೊಬ್ಬರು ಬಿಜೆಪಿಗೆ ಸಧ್ಯದಲ್ಲಿಯೇ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಈಗ ನಾಯಕರಿಲ್ಲದ ಮನೆಯಂತಾಗಿದೆ ಎಂದು ರಂಜನ್ ಲೇವಡಿ ಮಾಡಿ, ಅತ್ಯಧಿಕ ಮತಗಳ ಅಂತರದಿಂದ ತಾನು ಗೆಲವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.









