ಮಡಿಕೇರಿ ಮೇ.5 : ಚುನಾವಣೆಯಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ನನ್ನ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವ ತಾವು, ಬಿಜೆಪಿಯನ್ನು ಬೆಂಬಲಿಸುತ್ತಿರುವುದಾಗಿ ಕಾಂಗ್ರೆಸ್ ಪಕ್ಷದವರು ಹಾಗೂ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿರುವುದಾಗಿ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷದ ಪ್ರಬಲ ಪೈಪೋಟಿಯಿಂದಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಭಯ ಕಾಡುತ್ತಿದೆ ಎಂದು ಟೀಕಿಸಿದರು.
::: ನಿಲುವು ಸ್ಪಷ್ಟಪಡಿಸಲಿ:
ಹಿಜಾಬ್, ಹಲಾಲ್ ಘಟನೆಗಳ ಸಂದರ್ಭ ಧ್ವನಿ ಎತ್ತದ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವ ಭೀತಿಯಲ್ಲಿ ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಬಿಜೆಪಿಯ ‘ಬೀ ಟಿಂ’ ಆಗಿರುವ ಕಾಂಗ್ರೆಸ್ ಪಕ್ಷ, ಟಿಪ್ಪು ಜಯಂತಿ ಬಗ್ಗೆ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಲಿ ಎಂದು ನಾಪಂಡ ಮುತ್ತಪ್ಪ ಸವಾಲೆಸೆದರು. ನಾನು ಓರ್ವ ಎಡಪಂಥೀಯ ಚಿಂತಕ, ಜಯಂತಿ ಆಚರಣೆಯನ್ನು ಒಪ್ಪಲ್ಲ. ಜಯಂತಿಗಳಿಗೆ ನನ್ನ ವಿರೋಧವೂ ಇಲ್ಲ. ನಾನು ಕೇವಲ ಅಭಿವೃದ್ಧಿ ಪರ ನಿಲುವು ಹೊಂದಿದ್ದೇನೆ ಎಂದು ಸಷ್ಟಪಡಿಸಿದರು.
::: ಬೆಂಬಲದ ಹೇಳಿಕೆ ನೀಡಿಲ್ಲ :::
ಕರ್ನಾಟಕ ಡೆವಲಪ್‌ಮೆಂಟ್ ಇಂಡೆಕ್ಸ್ ಆಧಾರದಲ್ಲಿ ಅರಕಲಗೂಡು ತಾಲೂಕು ದಕ್ಷಿಣ ಕರ್ನಾಟಕದ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಇಲ್ಲಿನ ರಸ್ತೆಗಳಿಗೆ ಹೋಲಿಸಿದ್ದಲ್ಲಿ ಕೊಡಗಿನ ರಸ್ತೆಗಳು ಉತ್ತಮವಾಗಿವೆ. ಅಲ್ಲಿ ಅಭಿವೃದ್ದಿ ಮಾಡದವರು ಕೊಡಗಿನಲ್ಲಿ ಏನೂ ಅಭಿವೃದ್ದಿ ಮಾಡುತ್ತಾರೆ ಎಂದು ಹೇಳಿದ್ದೇನೆಯೇ ಹೊರತು ಬಿಜೆಪಿ ಅಭ್ಯರ್ಥಿ ರಂಜನ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ಎ.ಎಂ.ಬೆಳ್ಯಪ್ಪ, ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್, ಬಿ.ಎ.ಜೀವಿಜಯ ಅವರ ಕಾಣಿಕೆಯೂ ಇದೆ ಎಂದು ಹೇಳಿದರು. ನಾನು 132 ಕೋಟಿ ಆಸ್ತಿ ಘೋಷಿಸಿದ್ದು, ನಾನೇಕೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಲಿ ಎಂದು ಪ್ರಶ್ನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಗೆಲುವು ಅಚಲವಾಗಿದ್ದು, ನಾಪಂಡ ಮುತ್ತಪ್ಪ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಗೆಲುವಿಗೆ ಪೂರಕವಾಗಲಿದೆ. ಬಿಜೆಪಿ ಅಭ್ಯರ್ಥಿ ಕಳೆದ 25 ವರ್ಷಗಳಿಂದ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ಮಾಡಲಿ ಎಂದ ಅವರು, ನಾವು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 14 ತಿಂಗಳ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಇಸಾಕ್ ಖಾನ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಜಾಶೀರ್ ಮೂರ್ನಾಡು ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ ಉಪಸ್ಥಿತರಿದ್ದರು.









