ಮಡಿಕೇರಿ ಮೇ 6 : ಬಾಳೆಯಡ ಕಿಶನ್ ಪೂವಯ್ಯ ಮೂಲತಃ ನಾಪೋಕ್ಲುವಿನ ಬಾಳೆಯಡ ಬಿ.ಕೆ ಚರ್ಮಣ್ಣ, ಬಿ.ಸಿ.ಮಾಚಮ್ಮ ದಂಪತಿಯ ಪುತ್ರ.
ವಿರಾಜಪೇಟೆಯಲ್ಲಿ ಜನಿಸಿದ ಕೊಡಗಿನ ವಿವಿಧ ಸ್ಥಳಗಳಲ್ಲಿ ತಮ್ಮ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಹಾವನೂರು ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮಡಿಕೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ.
ವೃತ್ತಿಯಿಂದ ವಕೀಲರು ಮತ್ತು ನೋಟರಿಯಾದರೂ ಸಹ ಪ್ರವೃತ್ತಿಯು ಕೃಷಿ ಮತ್ತು ಸಮಾಜ ಸೇವೆ, ರಾಜಕೀಯ, ಕ್ರೀಡೆ ಇತ್ಯಾದಿ ಇವರ ವಿಶೇಷತೆ. ಸುಮಾರು 8 ವರ್ಷಗಳ ಕಾಲ ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದ ಇವರು ಪ್ರಸ್ತುತ ಜಿಲ್ಲಾ ಸಮಿತಿಯ ಆಹ್ವಾನಿತ ಸದಸ್ಯರಾಗಿದ್ದಾರೆ. ಕಾಲೇಜು ದಿನಗಳಲ್ಲಿಯೇ ಕನ್ನಡ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಿದ್ದವರು ಕೊಡವ ಸಾಹಿತ್ಯ ಅಕಾಡೆಮಿಯ ಸಮಾರಂಭಗಳಲ್ಲಿ, ಉಪ ಸಮಿತಿಗಳ ಸದಸ್ಯನಾಗಿ, ಸ್ಥಳೀಯ ವಾಹಿನಿಗಳಲ್ಲಿ ಮತ್ತು ಆಕಾಶ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಣೆ, 2014ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಹಿತಿ ಸಮಿತಿಯ ಪ್ರಧಾನ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಥಳೀಯ ಹಲವಾರು ಪತ್ರಿಕೆಗಳಲ್ಲಿ ಅಂಕಣಗಾರರಾಗಿ ಬರವಣಿಗೆಯ ಕೃಷಿ ನಡೆಸಿದ್ದಾರೆ.
ಸಾರಸ್ವತ ಲೋಕಕ್ಕೆ ಇವರು “ರಾಜಕೀಯ ಮತ್ತು ಪ್ರಕೃತಿ”, “ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ” ಎಂಬ ಎರಡು ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಅಲ್ಲಾರಂಡ ವಿಠ್ಠಲ ನಂಜಪ್ಪ, ಬೇಟೆ ಸಾಹಿತ್ಯ ಕೃತಿಯಲ್ಲಿ ಇವರ ಲೇಖನ ಪ್ರಕಟವಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕಾಗಿ ಜಿಲ್ಲಾ ಕನ್ನಡ ಪರಿಷತ್ತಿನಿಂದ ಸನ್ಮಾನಿಸಿದ್ದಾರೆ. ಅರಮೇರಿ ಮಠದ ವತಿಯಿಂದ ಸನ್ಮಾನಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಕಾವೇರಿ ಕೊಡವ ಕೇರಿ ಮಡಿಕೇರಿ ಇಲ್ಲಿ ಮಾಡಿದ ಸೇವೆಗಾಗಿ ಸಂಸ್ಥೆಯ ಬೆಳ್ಳಿ ಮಹೋತ್ಸವದಲ್ಲಿ ಸನ್ಮಾನಿಸಿದ್ದಾರೆ. ಮಡಿಕೇರಿ ವಕೀಲರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ 18 ವರ್ಷಗಳ ಕಾಲ ನಿರಂತರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಿದ್ದಾರೆ.
ಇಂದಿನ ಸಾಹಿತ್ಯಾಸಕ್ತರು ಮತ್ತು ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿಗಳಿಗಾಗಿ “ಹೆಚ್ಚಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇಂದಿನ ತಾಂತ್ರಿಕ ವ್ಯವಸ್ಥೆಯಡಿಯಲ್ಲಿ ಓದುವ ಹಾಗೂ ಬರೆಯುವ ಹವ್ಯಾಸವು ನಶಿಸಿ ಹೋಗುತ್ತಿದೆ. ಇದರಿಂದ ಸಾಹಿತ್ಯವು ಸೊರಗುತ್ತದೆ. ಚಿಂತನೆಗಳು ಕ್ರಿಯಾತ್ಮಕ ವಿಷಯಗಳು ದೂರವಾಗುತ್ತಿವೆ. ಕೊನೆಯ ಪಕ್ಷ ದಿನನಿತ್ಯ ದಿನಪತ್ರಿಕೆಗಳನ್ನು ಓದುವುದು ಬಹು ಮುಖ್ಯ ಸಾಹಿತ್ಯ ಕ್ಷೇತ್ರಕ್ಕೆ ಪತ್ರಿಕೆಗಳ ಕೊಡುಗೆ ಬಹುದೊಡ್ಡದು. ಪತ್ರಿಕೆ ಓದುವುದರಿಂದ ಪ್ರಚಲಿತ ವಿದ್ಯಮಾನಗಳನ್ನೂ, ಇತಿಹಾಸವನ್ನೂ, ರಾಜಕೀಯವನ್ನೂ, ಕ್ರೀಡೆ, ಕೃಷಿ, ಸಾಹಿತ್ಯ ಹೀಗೆ ಹಲವು ಹತ್ತು ವಿಷಯಗಳನ್ನು ಅರಿಯಬಹುದು. ಬರವಣಿಗೆಯನ್ನು ರೂಢಿಸಿ ಕೊಳ್ಳಲು ಕೊನೆಯ ಪಕ್ಷ ಎಲ್ಲರೂ ಆತ್ಮೀಯರಿಗೆ ಪತ್ರ ಬರೆಯುವ ಮೂಲಕ ಮತ್ತು ದಿನನಿತ್ಯ ತಮ್ಮ ಜೀವನದ ಘಟನೆಗಳನ್ನು ಬರೆಯುವ ಮೂಲಕ ಬರವಣಿಗೆಯನ್ನು ಜೀವಂತವಾಗಿರಿಸಿಕೊಳ್ಳಬಹುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್‌ಗಳಿಂದಾಗಿ ಶಾಲಾ ದಿನಗಳ ನಂತರ ಬರವಣಿಗೆ ಮರೆಯಾಗುತ್ತದೆ. ಇದು ಅಕ್ಷರ ಲೋಕದ ದುರಂತವಾಗಿ ಪರಿಣಮಿಸುತ್ತದೆ. ವಿಶೇಷವಾಗಿ ಶಾಲಾ ಶಿಕ್ಷಕರು ಮಕ್ಕಳಲ್ಲಿ ಸಾಹಿತ್ಯವನ್ನು ಓದುವ ಮತ್ತು ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳುವಂತೆ ಪ್ರಯತ್ನಿಸಬೇಕು ಎಂದು ತಮ್ಮ ಕಿವಿಮಾತುಗಳನ್ನು ಹೇಳುತ್ತಾರೆ. ಉಪಾಧ್ಯಾಯಿನಿಯಾಗಿರುವ ಪತ್ನಿ ಎಂ.ಜಿ.ಸವಿತಾ, ಪದವಿಧರೆ ಮಗಳು ವಿಭಾ ರಾಜೇಶ್ವರಿ, ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಮಗ ರಾಜೇಶ್ ಸುಬ್ರಮಣಿಯವರೊಂದಿಗೆ ಮಡಿಕೇರಿಯಲ್ಲಿ ಪ್ರಸ್ತುತ ವಾಸವಾಗಿದ್ದಾರೆ. ಇವರ ಮುಂದಿನ ಬದುಕು ಬರೆಹಗಳು ಇನ್ನಷ್ಟು ಪ್ರಜ್ವಲಿಸಲಿ ಎಂದು ಹಾರೈಸೋಣ.
( ವರದಿ : ಪಿ.ಎಸ್. ವೈಲೇಶ್, ಕೊಡಗು )








