ಮಡಿಕೇರಿ ಮೇ 6 : ಓಮನ್‍ನಲ್ಲಿ ಮೇ 23 ರಿಂದ ಜೂನ್ 1ರ ತನಕ ಜರುಗಲಿರುವ ಪುರುಷರ ಜೂನಿಯರ್ ಏಷ್ಯಾಕಪ್ ಹಾಕಿ-2023 ಚಾಂಪಿಯನ್‍ಶಿಪ್‍ಗೆ ಭಾರತ ಜೂನಿಯರ್ ಹಾಕಿ ತಂಡಕ್ಕೆ ಜಿಲ್ಲೆಯ ಯುವ ಆಟಗಾರ ಚಂದುರ ಬಿ.ಪೂವಣ್ಣ ಆಯ್ಕೆಗೊಂಡಿದ್ದಾರೆ.
ಇದು ಮುಂಬಲಿರುವ ಎಫ್.ಐ.ಎಸ್. ಜೂನಿಯರ್‍ಮೆನ್ಸ್ ವರ್ಲ್ಡ್ ಕಪ್ ಹಾಕಿ ಪಂದ್ಯಾಟಕ್ಕೆ ಅರ್ಹತೆ ಗಳಿಸುವ ಪ್ರತಿಷ್ಠಿತ ಪಂದ್ಯಾವಳಿಯೂ ಆಗಿದೆ. ಹಾಕಿ ಇಂಡಿಯಾ 18 ಆಟಗಾರರ ಹೆಸರನ್ನು ಜೂನಿಯರ್ ಏಷ್ಯಾಕಪ್ ಪಂದ್ಯಾವಳಿಗೆ ಪ್ರಕಟಿಸಿದ್ದು, ಇದರಲ್ಲಿ ಪೂವಣ್ಣ ಕೂಡ ಒಬ್ಬರಾಗಿದ್ದಾರೆ.
ಉತ್ತಮ್ ಸಿಂಗ್ ತಂಡದ ನಾಯಕರಾಗಿದ್ದು, ಕರ್ನಾಟಕ ರಾಜ್ಯದಿಂದ ಪೂವಣ್ಣ ಹಾಗೂ ಹೆಚ್.ಎಸ್.ಮೋಹಿತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪೂವಣ್ಣ 2022ರಲ್ಲಿ ಜರುಗಿದ 10ನೇ ಸುಲ್ತಾನ್ ಆಫ್ ಜೋಹಾರ್‍ಕಪ್ ಪ್ರಶಸ್ತಿ ಗಳಿಸಿದ್ದ ಜೂನಿಯರ್ ಇಂಡಿಯಾ ತಂಡವನ್ನೂ ಈ ಹಿಂದೆ ಪ್ರತಿನಿಧಿಸಿದ್ದರು. ಇವರು ಮೂಲತಃ ಕಂಡಂಗಾಲದ ನಿವಾಸಿ ಚಂದುರ ಎಸ್.ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ ಮಲ್ಲೇಂಗಡ, ಬಾಡಗರಕೇರಿ) ದಂಪತಿ ಪುತ್ರ.









