ಮಡಿಕೇರಿ ಮೇ 6 : ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾ ಯುವಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ 200 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೊಟ್ಟಮುಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭ ಮಾತನಾಡಿದ, ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಕೊಡಗು ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರನ್ನು ಬರೀ ವೋಟ್ ಗಾಗಿ ಬಳಸಲಾಗುತ್ತಿದೆ. ಬಿಜೆಪಿ ಕೋಮುವಾದಿ ಪಕ್ಷವಾಗಿದೆ.
ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದ ಜೆಡಿಎಸ್ ಪಕ್ಷ. ಅಲ್ಪಸಂಖ್ಯಾತರನ್ನು ರಾಜ್ಯಾಧ್ಯಕ್ಷರಾಗಿ ಮಾಡಿರುವ ಏಕೈಕ ಪಕ್ಷ ವಾಗಿದೆ ಎಂದರು.
ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಮುನ್ಸೂಚನೆ ಬಹುತೇಕರಿಗೆ ಸಿಕ್ಕಿದೆ, ಇದರಿಂದಲೇ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ನಾಪಂಡ ಮುತ್ತಪ್ಪ ಹೇಳಿದರು.
ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಸೀರ್ ಮೂರ್ನಾಡು ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಅಲ್ಪಸಂಖ್ಯಾತರು ಒಗ್ಗಟ್ಟಾಗಿ ನಾಪಂಡ ಮುತ್ತಪ್ಪನವರಿಗೆ ಮತ ಚಲಾಯಿಸುವಂತೆ ಜಾಸೀರ್ ಮೂರ್ನಾಡು ಕರೆ ನೀಡಿದರು.
ಈ ಸಂದರ್ಭ ಕೊಟ್ಟಮುಡಿಯ ಉಲಮಾ ನಾಯಕರ ಆಶೀರ್ವಾದವನ್ನು ನಾಪಂಡ ಮುತ್ತಪ್ಪ ಪಡೆದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಷರೀಫ್ ಸುಂಟ್ಟಿಕೊಪ್ಪ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಯೂಸುಫ್ ಕೊಂಡಂಗೇರಿ, ಜಿಲ್ಲಾ ಜೆಡಿಎಸ್ ವಕ್ತಾರ ಜಿನಾಸುದ್ದೀನ್ ಸುಂಟ್ಟಿಕೊಪ್ಪ, ಝಕರೀಯಾ ಕೊಟ್ಟಮುಡಿ ಹಾಗೂ 200 ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಇದ್ದರು.