ಸೋಮವಾರಪೇಟೆ ಮೇ 6 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಚಲನ ಚಿತ್ರ ನಟ ಸಾಧುಕೋಕಿಲ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ|| ಮಂತರ್ ಗೌಡ ಅವರ ಪರವಾಗಿ ಶನಿವಾರ ಬಿರುಸಿನ ಪ್ರಚಾರ ನಡೆಸಿದರು.
ಮಾದಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಾಧುಕೋಕಿಲ, ಶ್ರೇಷ್ಠ ನಾಯಕರು ಹುಟ್ಟಿದ ಪುಣ್ಯ ಭೂಮಿ ಕೊಡಗು ಜಿಲ್ಲೆ ಸೇನೆ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಆದರೆ, ಯಾವುದೇ ಗುರುತರ ಅಭಿವೃದ್ಧಿಯಾಗಿಲ್ಲ. ಕಳೆದ 25 ವರ್ಷಗಳಿಂದ ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಿರುವ ಶಾಸಕ ಅಪ್ಪಚ್ಚು ರಂಜನ್ ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸಮಸ್ಯೆಗಳು ಎದ್ದು ಕಾಣುತ್ತಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಯುವ ನಾಯಕ ಮಂತರ್ ಗೌಡ ಅವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ಡಾ.ಮಂತರ್ ಗೌಡ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ, ಎಲ್ಲಾ ಸಮಸ್ಯೆ ಬಗೆಹರಿಸಿರುವುದಾಗಿ ಶಾಸಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸುವುದನ್ನು ಬಿಟ್ಟು, ಎದುರಾಳಿ ಅಭ್ಯರ್ಥಿಯ ವೈಯುಕ್ತಿತ ತೇಜೋವಧೆ ಮಾಡಿ ಮತಯಾಚಿಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ. ಸೋಲುವ ಭೀತಿಯಿಂದ ಅವರು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ಮಾಡಿರುವ, ಮಾಡಬೇಕಿರುವ ಕೆಲಸಗಳನ್ನು ಹೇಳಿ ಮತಯಾಚಿಸಲಿ. ಕಳೆದ 25 ವರ್ಷಗಳಿಂದ ಮಾಡಲಾಗದ ಸಾಧನೆಯನ್ನು ಮುಂದಿನ 5 ವರ್ಷಗಳಲ್ಲಿ ಮಾಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಕೊನೆಯ ಚುನಾವಣೆ ಎಂದು ಜನರ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದರೆ ಕ್ಷೇತ್ರ ಮತ್ತೆ 5 ವರ್ಷಗಳಷ್ಟು ಹಿಂದಿನಂತೆಯೇ ಆಗಲಿದೆ ಎಂದು ಟೀಕಿಸಿದರು. ತಮ್ಮ ಅಮೂಲ್ಯ ಮತ ನನಗೆ ನೀಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಬಿ.ಬಿ.ಸತೀಶ್, ಕೆ.ಎಂ.ಲೋಕೇಶ್, ಬಿ.ಈ. ಜಯೇಂದ್ರ, ಸುಜು ತಿಮ್ಮಯ್ಯ, ಹಣಕೋಡು ಸುರೇಶ್ ಮತ್ತಿತರರು ಇದ್ದರು. ಗೌಡಳ್ಳಿ, ದೊಡ್ಡಮಳ್ತೆ, ಹೊನ್ನಮ್ಮನ ಕೆರೆ, ಗುಡುಗಳಲೆ ಸೇರಿದಂತೆ ಹಲವೆಡೆ ಪ್ರಚಾರ ನಡೆಸಲಾಯಿತು.