ಶನಿವಾರಸಂತೆ ಮೇ 6 : ಭಾರತದಲ್ಲಿ ಮುಂದುವರೆದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಜನತೆಗೆ ಕಾಂಗ್ರೆಸ್‌ನ ಉಚಿತ ಗ್ಯಾರಂಟಿಗಳ ಅಗತ್ಯವಿಲ್ಲವೆಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಬಿಜೆಪಿ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ‘ಕೊಡಗಿನ ಜನತೆಗೆ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಡಾ. ಹಿಮಂತ್ ಬಿಸ್ವಾಸ್ ಶರ್ಮಾ, ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಸ್ಪಷ್ಟಬಹುಮತದೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.
ಸ್ಪಷ್ಟ ಬಹುಮತ- ಈ ಹಿಂದೆ ಬಿಜೆಪಿ 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದ್ದರೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ‘ಬಜರಂಗದಳದ ನಿಷೇಧ’ ಪ್ರಸ್ತಾಪದಿಂದಾಗಿ ಬಿಜೆಪಿ 150 ಸ್ಥಾನಗಳಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ಹೇಳಿದರು.
ಓಲೈಕೆ ರಾಜಕಾರಣ-ಧರ್ಮದ ಆಧಾರದ ಮೀಸಲಾತಿಯನ್ನು ರದ್ದುಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಭಿನಂದನಾರ್ಹ ಕಾರ್ಯಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೇವಲ ಒಂದು ಧರ್ಮವನ್ನು ಓಲೈಕೆ ಮಾಡುವ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದು, ಕಾಂಗ್ರೆಸ್ ಪಕ್ಷ ಟಿಪ್ಪು ಸುಲ್ತಾನ್ ಪಾರ್ಟಿಯಾಗಿದೆ. ಗ್ಯಾರಂಟಿಯೇ ಇಲ್ಲದ ಕಾಂಗ್ರೆಸ್ ಸರಕಾರ ಉಚಿತ ಭರವಸೆಗಳ ಗ್ಯಾರಂಟಿಗಳನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಾತಿವಾದಿಗಳ ಅಖಾಡ ಅಲ್ಲ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕೊಡಗಿನ ನೆಲ ಜಾತಿವಾದಿಗಳ ಅಖಾಡ ಅಲ್ಲ. ಇದು, ಹಿಂದುತ್ವವಾದಿಗಳ ಭದ್ರಕೋಟೆ ಎಂಬುದನ್ನು ಕ್ಷೇತ್ರದ ಜನತೆ ಮತ್ತೊಮ್ಮೆ ಸಾಬೀತುಪಡಿಸಬೇಕಿದೆ.
ಶಾದಿಭಾಗ್ಯ, ಶಾಲಾ ವಿದ್ಯಾರ್ಥಿಗಳಿಗೆ ಪ್ರವಾಸದ ಹೆಸರಿನಲ್ಲಿ ಶಾಲಾ ವಿದ್ಯಾರ್ಥಿಗಳ ಮನಸ್ಸಿನಲ್ಲೂ ಜಾತಿಯ ವಿಷಬೀಜ ಬಿತ್ತುವುದು ಕಾಂಗ್ರೆಸ್ ನೀತಿಯಾಗಿದ್ದರೆ, ಜನ್‌ಧನ್, ಗ್ಯಾಸ್, ಕರೆಂಟ್, ಪ್ರಧಾನ ಮಂತ್ರಿಗಳ ಅವಾಸ್ ಯೋಜನೆ, ಉಚಿತ ರೇಷನ್, ಕೋವಿಡ್ ಇಂಜೆಕ್ಷನ್ ನೀಡುವಾಗ ಬಿಜೆಪಿ ಪಕ್ಷ ಜನರ ಜಾತಿ ಕೇಳಲಿಲ್ಲ ಇದು ಬಿಜೆಪಿ ನೀತಿಯಾಗಿದೆ. ಕಾಂಗ್ರೆಸ್ ಪಕ್ಷ ಇದ್ದಿದ್ದರೇ ಕೋವಿಡ್ ಇಂಜೆಕ್ಷನ್ ನೀಡುವಾಗಲೂ ಜಾತಿ ಕೇಳುತ್ತಿದ್ದರು ಎಂದು ಟೀಕಿಸಿದರು.
ಸ್ವತಂತ್ರ ಬಸವಲಿಂಗ ಸ್ವಾಮೀಜಿ ಆಶೀರ್ವನ ನೀಡಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಈ ಹಿಂದೆ ಅರಕಲಗೋಡುವಿನಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಅವಧಿಯಲ್ಲಿ ಏನೂ ಅಭಿವೃದ್ದಿ ಕಾರ್ಯ ಮಾಡದೇ, ಇದೀಗ ಕೊಡಗನ್ನು ಅಭಿವೃದ್ಧಿ ಮಾಡುತ್ತೇನೆಂದು ಹೇಳುತ್ತಿದ್ದಾರೆಂದು ಟೀಕಿಸಿದರಲ್ಲದೇ, ಹಿಂದುತ್ವದ ಆಧಾರದಲ್ಲಿ ಸರಕಾರ ರಚನೆ ಮಾಡುವ ಪಕ್ಷ ಅಂತ ಇದ್ದರೇ ಅದು ಭಾರತೀಯ ಜನತಾ ಪಾರ್ಟಿ ಮಾತ್ರ ಎಂದರು.
ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಮೋದಿ ಅವರ ಹತ್ತು ಹಲ ಜನಪರ ಕಾರ್ಯಕ್ರಮಗಳು ಜನರಿಗೆ ತಲುಪಿಸಿದ್ದಾರೆ. ಇಂದು ಕಾಂಗ್ರೆಸ್ ರಾಷ್ಟ್ರಭಕ್ತ ಬಜರಂಗದಳ ಸಂಘಟನೆಯ ನಿಷೇಧದ ವಿಚಾರವನ್ನು ಪ್ರಸ್ತಾಪಿಸಿದ್ದು, ಇದಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ.ಚುನಾವಣೆಯಲ್ಲಿ ಬಿಜೆಪಿಯನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.
ಪಕ್ಷಕ್ಕೆ ಸೇರ್ಪಡೆ-ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಬಿ.ಎಸ್.ಅನಂತ್‌ಕುಮಾರ್ ಅವರು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಮಾಜಿ ಎಂಎಲ್‌ಸಿ, ಎಸ್.ಜಿ.ಮೇದಪ್ಪ ಮುಖಂಡರಾದ ಮಾದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.