ಮಡಿಕೇರಿ ಮೇ 7 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ತೀರಾ ಕೀಳು ಮಟ್ಟದ ಪದ ಬಳಕೆ ಮಾಡುವ ಮೂಲಕ ವೈಯುಕ್ತಿಕ ತೇಜೋವಧೆ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ಪ್ರಮುಖರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಾಂಗ್ರೆಸಿಗರು ತಮ್ಮ ಅಭ್ಯರ್ಥಿ ಪೊನ್ನಣ್ಣ ಅವರ ಕುರಿತು ಬಿಜೆಪಿ ತೇಜೋವಧೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ತನ್ನ ಚುನಾವಣಾ ಪ್ರಚಾರದ ಸಂದರ್ಭ ಅಭ್ಯರ್ಥಿಯ ಹಿನ್ನೆಲೆಯನ್ನು ಮಾತ್ರವೇ ಮತದಾರರಿಗೆ ತಿಳಿಸಿದೆ. ಪ್ರತಿಸ್ಪರ್ಧಿ ಅಭ್ಯರ್ಥಿಯ ಪೂರ್ವಪರವನ್ನು ಮತದಾರರಿಗೆ ತಿಳಿಸುವುದು ವೈಯುಕ್ತಿಕ ತೇಜೋವಧೆ ಅಲ್ಲ, ರಾಜಕೀಯ ಕ್ಷೇತ್ರದಲ್ಲಿ ಇರುವವರು ಇದನ್ನು ಮೊದಲು ಅರಿತುಕೊಳ್ಳಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರ ಕುರಿತು ಅವಹೇಳನಕಾರಿ ಮತ್ತು ಕೀಳು ಪದ ಬಳಕೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
::: ಪ್ರಣಾಳಿಕೆ ‘ಎಡಿಟ್’ :::
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಮಹತ್ವ ಮತ್ತು ಯೋಜನೆಗಳನ್ನು ನೀಡುವುದಾಗಿ ಘೋಷಿಸಿದೆ. ಈ ಪ್ರಣಾಳಿಕೆಯನ್ನು ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಘೋಷಿಸಿದ ಪ್ರಣಾಳಿಕೆಯನ್ನು ಎಡಿಟ್ ಮಾಡಿ ಬಿಜೆಪಿ ನಾಯಕರ ಫೋಟೋಗಳನ್ನು ಅದಕ್ಕೆ ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರ ಹಿಂದೆ ಕೆಲವು ಪರಿಸರವಾದಿಗಳ ಕುಮ್ಮಕ್ಕು ಇದ್ದು, ಈ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಮನು ಮುತ್ತಪ್ಪ ಹೇಳಿದರು.
::: ಜಾತಿ ಕಾರ್ಡ್ ನಡೆಯಲ್ಲ :::
ಕೊಡಗು ಜಿಲ್ಲೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ಜಾತಿಯನ್ನು ಮುಂದಿಟ್ಟು ಅಭ್ಯರ್ಥಿಗಳ ಅಪಪ್ರಚಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಗೌಡ ಸಮುದಾಯ ಹೆಚ್ಚಿರುವ ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಅಭ್ಯರ್ಥಿಯನ್ನು, ಕೊಡವ ಸಮುದಾಯ ಅಧಿಕವಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಗೌಡ ಸಮುದಾಯದ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುವ ಮೂಲಕ ಜಾತ್ಯಾತೀತತೆ ಮೆರೆದಿದೆ. ಎರಡೂ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಜಾತಿ ಕಾರ್ಡ್ ನಡೆಯಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ ಎಂದು ಮನು ಮುತ್ತಪ್ಪ ಹೇಳಿದರು.
::: ಇಷ್ಟು ದಿನ ಎಲ್ಲಿದ್ದರು :::
ಕೊಡಗು ಜಿಲ್ಲೆಯಲ್ಲಿ ಜಮ್ಮಾ ಸಮಸ್ಯೆ, ಭೂ ಕುಸಿತ ಸೇರಿದಂತೆ ಜ್ವಲಂತ ಸಮಸ್ಯೆಗಳು ಎದುರಾದಾಗ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದ ಮನು ಮುತ್ತಪ್ಪ, ಕೇವಲ ಒಂದೂವರೆ ವರ್ಷಗಳ ಹಿಂದೆ ವಿರಾಜಪೇಟೆ ಕ್ಷೇತ್ರಕ್ಕೆ ಪೊನ್ನಣ್ಣ ಆಗಮಿಸಿದ್ದಾರೆ. ಇದೀಗ ತಾನು ಇಲ್ಲಿಯ ನಿವಾಸಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಟಿಪ್ಪು ಜಯಂತಿ ನಡೆಯುವ ಸಂದರ್ಭ ಪೊನ್ನಣ್ಣ ಅವರು ಕಾಂಗ್ರೆಸ್ ಸರಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕೆಲಸ ಮಾಡಿದ್ದರು. ಟಿಪ್ಪು ಜಯಂತಿ ಆಚರಿಸದಂತೆ ಅಂದು ಅವರು ಸರಕಾರಕ್ಕೆ ಸಲಹೆ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಇದೀಗ ಅಭಿವೃದ್ಧಿ ಕುರಿತು ಮಾತನಾಡಿ ಎಂದು ಹೇಳುವ ಪೊನ್ನಣ್ಣ ಅವರಿಗೆ ಬಿಜೆಪಿ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸೋಲುವ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇದೀಗ ಜಾತಿಯನ್ನಿಟ್ಟುಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
::: ಬಹುಮತದ ಗೆಲುವು :::
ಕೋವಿಡ್, ಲಾಕ್‌ಡೌನ್, ಪ್ರಾಕೃತಿಕ ವಿಕೋಪಗಳ ಸಂಕಷ್ಟಗಳ ನಡುವೆಯೂ ಬಿಜೆಪಿ ಸರಕಾರ ಕೊಡಗು ಜಿಲ್ಲೆಗೆ ಸಾವಿರಾರು ಕೋಟಿ ರೂ.ಗಳನ್ನು ಅನುದಾನವಾಗಿ ನೀಡಿ ಅಭಿವೃದ್ಧಿಗೆ ಒತ್ತು ನೀಡಿದೆ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಕನಿಷ್ಠ 25 ರಿಂದ 30 ಸಾವಿರ ಮತಗಳ ಅಂತರದಿoದ ವಿಜಯ ಸಾಧಿಸುತ್ತಾರೆ ಎಂದು ಮನು ಮುತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಪ್ರಮುಖರಾದ ನೆಲ್ಲೀರ ಚಲನ್, ಜಿ.ಪಂ ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ ಹಾಗೂ ವಕ್ತಾರ ಮಹೇಶ್ ಜೈನಿ ಉಪಸ್ಥಿತರಿದ್ದರು.
Breaking News
- *ರಾಷ್ಟ್ರೀಯ ಹಾಕಿ ತಂಡಕ್ಕೆ ಪಿ.ಯು.ತನುಷ್ ಆಯ್ಕೆ*
- *ಹೆಬ್ಬಾಲೆ ಸರ್ಕಾರಿ ಶಾಲೆಯಲ್ಲಿ ಗಮನ ಸೆಳೆದ ಇಂಗ್ಲಿಷ್ ಭಾಷಾ ಮೇಳ*
- *”ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ”ಗೆ ಕೃತಿಗಳ ಆಹ್ವಾನ*
- *ಮಾವಿನಹಳ್ಳ ಹಾಡಿ ಮತ್ತು ಕಟ್ಟೆ ಹಾಡಿಯ ಅರಣ್ಯ ಹಕ್ಕು ಗ್ರಾಮಸಭೆ*
- *ಬಾಳೆಲೆ : ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ*
- *ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ*
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*