ಮಡಿಕೇರಿ, ಮೇ 8 : ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಅವರು ಬರೆದಿರುವ ಪತ್ರಿಕೋದ್ಯಮದ, ಅನುಭವ ಆಧಾರಿತ ಪುಸ್ತಕ ‘ಸೊಡರು’ ಮೇ 14 ರಂದು ಮಡಿಕೇರಿಯಲ್ಲಿ ಬಿಡುಗಡೆಗೊಳ್ಳಲಿದೆ.
ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಯಂ.ಸಿ. ನಾಣಯ್ಯ, ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸ್ಥಾಪಕ ಕೆ.ಬಿ.ಗಣಪತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರೆಸ್ ಕ್ಲಬ್ ಹಾಗೂ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ.ರಮೇಶ್, ‘ಶಕ್ತಿ’ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಭಾಗವಹಿಸಲಿದ್ದಾರೆ.
ಪುಸ್ತಕದೊಳಗೆ ವರದಿಗಾರಿಕೆ ಸಂದರ್ಭ ಉಂಟಾಗುವ ಎಡರು ತೊಡರುಗಳು, ಇರಿಸು ಮುರಿಸುಗಳು, ಕಾನೂನು ಅಡಚಣೆಗಳು, ಬೆದರಿಕೆಗಳು, ಸ್ವಯಂಕೃತ ಅಪರಾಧಗಳು ಇತ್ಯಾದಿ ವಿಚಾರ ಉದಾಹರಣೆ ಸಹಿತ ನೀಡಲಾಗಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಜಿ. ಚಿದ್ವಿಲಾಸ್ ಅವರ ಮಾಲೀಕತ್ವದ ರೆಡ್‍ಬ್ರಿಕ್ಸ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ. ಸಭಾಂಗಣದಲ್ಲಿ ಪುಸ್ತಕ ಮಳಿಗೆ ಒಂದನ್ನೂ ವ್ಯವಸ್ಥೆಗೊಳಿಸುತಿದ್ದು, ಭಾಗವಹಿಸುವ ಜಿಲ್ಲೆಯ ಸಾಹಿತಿಗಳು, ಬರಹಗಾರರು ಅವರು ಹೊರತಂದ ಪುಸ್ತಕಗಳನ್ನು ಇರಿಸಿ ಮಾರಾಟ ಮಾಡಬಹುದು ಎಂದು ಬಿ.ಜಿ. ಅನಂತ ಶಯನ ತಿಳಿಸಿದ್ದಾರೆ.








