ಮಡಿಕೇರಿ ಮೇ 8 : ಕೊಡಗು ಜಿಲ್ಲೆಯಲ್ಲಿ ಕಳೆದ 20-25 ವರ್ಷಗಳ ಕಾಲ ಸೋಲು ಅನುಭವಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ದಾಖಲೆ ನಿರ್ಮಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಎ.ಎಸ್.ಪೊನ್ನಣ್ಣ ಅವರುಗಳು ವಿದ್ಯಾವಂತರು ಹಾಗೂ ಅಭಿವೃದ್ಧಿಪರ ಚಿಂತನೆ ಹೊಂದಿದವರಾಗಿದ್ದು, ಇವರ ಗೆಲುವು ನಿಶ್ಚತವೆಂದರು.
ಚುನಾವಣಾ ಪ್ರಚಾರದ ಸಂದರ್ಭ ಜನಬೆಂಬಲ ಇವರಿಬ್ಬರ ಪರವಾಗಿದೆ. ಕಳೆದ 20-25 ವರ್ಷಗಳ ಕಾಲದ ಆಡಳಿತದಿಂದ ಜಿಲ್ಲೆಯ ಜನ ಬೇಸತ್ತು ಹೋಗಿದ್ದು, ಬದಲಾವಣೆಯನ್ನು ಬಯಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಪಕ್ಷ ತೊರೆದಿರುವುದರಿಂದ ಯಾವುದೇ ತೊಂದರೆ ಆಗಿಲ್ಲ. ಉಪಾಧ್ಯಕ್ಷ ಸ್ಥಾನದಲ್ಲಿದ್ದ ಅನಂತಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲಾ ಸ್ಥಾನಮಾನಗಳನ್ನು ನೀಡಿತ್ತು. ಆದರೂ ಪಕ್ಷ ತೊರೆದಿದ್ದಾರೆ, ಈ ಬೆಳವಣಿಗೆಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ತೊಡಕಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಕೊಡಗಿನ ಎರಡೂ ಕ್ಷೇತ್ರಗಳು ಸೇರಿದಂತೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಲಿದೆ. ಸ್ಪಷ್ಟ ಬಹುಮತ ಸಿಗದ್ದಿದ್ದರೆ ತ್ರಿಶಂಕು ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವ ಅರಿವು ಮತದಾರರಿಗೆ ಇರುವುದರಿಂದ ಕಾಂಗ್ರೆಸ್ ಗೆ ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಪರೇಷನ್ ರಾಜಕಾರಣ ಮತ್ತು ತ್ರಿಶಂಕು ಸ್ಥಿತಿ ನಿರ್ಮಾಣದಿಂದ ಗೊಂದಲ ಸೃಷ್ಟಿಯಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸುವ ಅನಿವಾರ್ಯತೆ ಇದೆ ಎಂದರು.
ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿಗಳು ಭ್ರಷ್ಟಾಚಾರದ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ ಎಂದು ಟೀಕಿಸಿದ ಅವರು, ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಮತದಾರರು ಬದಲಾವಣೆ ಬೇಕು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಪೊನ್ನಣ್ಣ ಹಾಗೂ ಮಂತರ್ ಗೌಡ ಗೆಲವು ಸಾಧಿಸಲಿದ್ದಾರೆ. ಸೋಲಿನ ಭೀತಿಯಲ್ಲಿರುವ ಬಿಜೆಪಿ ವೈಯುಕ್ತಿತ ತೇಜೋವಧೆಯಲ್ಲಿ ತೊಡಗಿದೆ. ಜನ ಈಗಾಗಲೇ ಬದಲಾವಣೆಯ ನಿರ್ಧಾರ ಕೈಗೊಂಡಿರುವುದರಿಂದ ಅಪಪ್ರಚಾರ ಮತ್ತು ಸುಳ್ಳು ಆರೋಪಗಳಿಗೆ ಮರುಳಾಗುವುದಿಲ್ಲ. ಕಾಂಗ್ರೆಸ್ ಎಂದಿಗೂ ಪ್ರತಿಸ್ಪರ್ಧಿಗಳ ತೇಜೋವಧೆ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ. ಗೆಲುವಿಗೆ ಸಹಕಾರ ನೀಡಿ ಎಂದಷ್ಟೇ ಮನವಿ ಮಾಡಿದ್ದೇವೆ ಎಂದು ರಮೇಶ್ ಸ್ಪಷ್ಟಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ ಮಡಿಕೇರಿ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಓರ್ವ ಶಾಸಕರೇ ರಾಜಕಾರಣ ಮಾಡುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ ಎಂದರು.
ಹೋರಾಟದ ಮೂಲಕ ಕುಶಾಲನಗರ ಪ್ರತ್ಯೇಕ ತಾಲ್ಲೂಕು ರಚನೆಯಾಗಿದೆ. ಶಾಸಕರು ಅಗತ್ಯ ಅನುದಾನವನ್ನೇ ತಂದಿಲ್ಲವೆಂದು ಟೀಕಿಸಿದರು.
ಪ್ರಮುಖರಾದ ಕೆ.ಎಂ.ಲೋಕೇಶ್ ಮಾತನಾಡಿ ಜೀವಿಜಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಶೇ.90 ರಷ್ಟು ಲಾಭವಾಗಿತ್ತು, ಪಕ್ಷ ಬಿಟ್ಟಾಗ ಕೇವಲ ಶೇ.10 ರಷ್ಟು ನಷ್ಟವಾಗಿದೆ ಅಷ್ಟೇ ಎಂದರು.
ಕಳೆದ 20-25 ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯ ವ್ಯವಸ್ಥೆ ಬದಲಾಗದೆ ಉಳಿದಂತೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕೂಡ ಆಗುತ್ತಿಲ್ಲ. ಸುದೀರ್ಘ ಕಾಲ ಅಧಿಕಾರಿಗಳು ಇಲ್ಲೇ ಉಳಿದಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕ್ತಾರ ತೆನ್ನಿರ ಮೈನಾ ಉಪಸ್ಥಿತರಿದ್ದರು.