ಮಡಿಕೇರಿ ಮೇ 8 : ಕೋಮು ಭಾವನೆ ಬಿತ್ತುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಜನರನ್ನು ಗೊಂದಲಕ್ಕೀಡು ಮಾಡುತ್ತಿವೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಜಾಶೀರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಎದುರಾಗಿರುವ ಚುನಾವಣೆ ಅತ್ಯಂತ ವಿಭಿನ್ನ ರೀತಿಯದ್ದಾಗಿದೆ. ಅಲ್ಪಸಂಖ್ಯಾತರು ತನ್ನ ಮತ ಬ್ಯಾಂಕ್ ಎಂದು ಭಾವಿಸಿಕೊಂಡಿರುವ ಕಾಂಗ್ರೆಸ್ ಈಗಾಗಲೇ ಗೆದ್ದಿರುವ ಭ್ರಮೆಯಲ್ಲಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪದ ಕಾಂಗ್ರೆಸ್ ಮುಖಂಡ ಕೆ.ಎಂ.ಇಬ್ರಾಹಿಂ ಅವರ ಪುತ್ರ ರಫೀಕ್ ಅವರು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಜಾತ್ಯತೀತ ನಿಲುವಿನ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರನ್ನು ಕ್ಷೇತ್ರದ ಜನತೆ ಆಶೀರ್ವದಿಸಲಿದ್ದು, ಅವರ ಗೆಲುವು ನಿಶ್ಚಿತವೆಂದು ಹೇಳಿದರು.
ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ಪ್ರಮುಖ ರಾಜಕೀಯ ಪಕ್ಷಗಳು ಜೆಡಿಎಸ್ ಈ ಚುನಾವಣೆಯಲ್ಲಿ ಹೊಂದಾಣಿಕೆಯ ರಾಜಕೀಯ ಮಾಡುತ್ತಿರುವುದಾಗಿ ಅಪಪ್ರಚಾರ ಮಾಡುತ್ತಿವೆ. ನಿಜಾಂಶವೆಂದರೆ ಒಳ ಒಪ್ಪಂದ ಮಾಡಿಕೊಂಡಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರವಿ ಕಿರಣ್, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಯೂಸುಫ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಕೆ.ಐ ಹಾಗೂ ಪಕ್ಷದ ಪ್ರಮುಖರಾದ ಜಿನಾಸ್ ಸುಂಟಿಕೊಪ್ಪ ಉಸ್ಥಿತರಿದ್ದರು.









