ಮಡಿಕೇರಿ ಮೇ.8 : ವಿಧಾನಸಭಾ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 543 ಮತಗಟ್ಟೆಗಳಲ್ಲಿ ಮೇ, 10 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 4,56,313 ಮತದಾರರಿದ್ದು, 2,24,875 ಪುರುಷರು ಮತ್ತು 2,31,415 ಮಹಿಳಾ ಮತದಾರರು, 23 ಇತರ ಮತದಾರರು ಇದ್ದಾರೆ ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,32,148 ಮತದಾರರಿದ್ದು, 1,13,585 ಪುರುಷರು ಮತ್ತು 1,18,553 ಮಹಿಳಾ ಮತದಾರರಿದ್ದಾರೆ. 10 ಮಂದಿ ಇತರ ಮತದಾರರು ಇದ್ದಾರೆ ಎಂದು ಹೇಳಿದರು.
ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,24,165 ಮತದಾರರಿದ್ದು, 1,11,290 ಪುರುಷ ಮತ್ತು 1,12,862 ಮಹಿಳಾ ಮತದಾರರು ಇದ್ದಾರೆ. 13 ಇತರ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತದಾರರಿಗೂ ಮತದಾರರ ಚೀಟಿಯನ್ನು ಪ್ರತಿ ಕುಟುಂಬಕ್ಕೆ ಒಂದರಂತೆ ಮತದಾರರ ಗೈಡ್‍ನ್ನು ಸಹ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ ಮನೆಗೆ ವಿತರಿಸಲಾಗುತ್ತದೆ ಎಂದರು.
ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳು ನಡೆಸುವ ಸಾರ್ವಜನಿಕ ಬಹಿರಂಗ ಪ್ರಚಾರವು ಮತದಾನದ ಅವಧಿ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಮುಕ್ತಾಯಗೊಳ್ಳುತ್ತದೆ. ಪ್ರಚಾರದ ಅವಧಿ ಕೊನೆಗೊಂಡ ಬಳಿಕ ಹೊರಗಿನ ಮತ ಕ್ಷೇತ್ರದಿಂದ ಕರೆ ತಂದ ಮತ್ತು ಈ ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು/ ಪಕ್ಷದ ಕಾರ್ಯಕರ್ತರು / ಮೆರವಣಿಗೆ ಸಂಬಂಧ ಕಾರ್ಯಕರ್ತರು/ ಪ್ರಚಾರ ಕಾರ್ಯಕರ್ತರು ಮುಂತಾದವರು ಕ್ಷೇತ್ರಗಳಿಂದ ಹೊರಹೋಗಬೇಕು. ಚುನಾವಣೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕಗಳನ್ನು ಉಪಯೋಗಿಸಲು ಅನುಮತಿ ನೀಡುವುದಿಲ್ಲ ಎಂದರು.
ಗುರುತಿನ ಚೀಟಿ ತೋರಿಸಿ ಮತದಾನ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೆ ಮಾನ್ಯತೆ ಪಡೆದ 12 ಬಗೆಯ ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.
ಆಧಾರ್ ಕಾರ್ಡ್, ಎಂಎನ್‍ಆರ್‍ಇಜಿಎ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಹೆಲ್ತ್ ಇನ್ಸುರೆನ್ಸ್ ಕಾರ್ಡ್, ಚಾಲನಾ ಪರವಾನಗಿ ಪತ್ರ, ಪಾನ್‍ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‍ಜಿಐ ವತಿಯಿಂದ ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು. ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ ತೋರಿಸಿ ಮತ ಹಕ್ಕು ಚಲಾಯಿಸಬಹುದಾಗಿದೆ.
‘ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಪ್ರತಿ ಮತಗಟ್ಟೆಯ 200 ಮೀಟರ್ ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬೂತ್‍ಗಳನ್ನು ಸ್ಥಾಪಿಸಬಹುದಾಗಿದೆ. ಈ ಬೂತ್‍ಗಳಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಂದ ಪಡೆಯುವುದು.’
ಮತದಾನ ಹಾಗೂ ಮತ ಎಣಿಕೆ ಸಂಬಂಧ ಮದ್ಯ ಮಾರಾಟ ನಿಷೇಧಿಸುವ ಕುರಿತು: ವಿಧಾನಸಭಾ ಚುನಾವಣೆಯ ಮತದಾನ ಸಂಬಂಧ ಮೇ 8 ರ ಸಂಜೆ 6 ರಿಂದ ಮೇ 10 ರ ಮಧ್ಯರಾತ್ರಿ 12 ಗಂಟೆ ವರೆಗೆ ಮತ್ತು ಮತ ಏಣಿಕೆ ಸಂಬಂಧ ಮೇ 12 ರ ಮಧ್ಯರಾತ್ರಿ 12 ರಿಂದ ಮೇ 13 ರ ಮಧ್ಯರಾತ್ರಿ 12 ಗಂಟೆ ವರೆಗೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ವಿಧದ ಮದ್ಯಗಳ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಸ್ಟಾರ್ ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ.
ಮೇ 08 ರ ಸಂಜೆ 6 ರಿಂದ ಮೇ 10 ರ ಮಧ್ಯರಾತ್ರಿ 12 ಗಂಟೆ ವರೆಗೆ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ರಾಜ್ಯದ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ವಿಧದ ಮದ್ಯಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ.
ಮೈಕ್ರೋ ವೀಕ್ಷಕರ ನೇಮಕ ಮತ್ತು ತರಬೇತಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 75 ಮೈಕ್ರೋ ವೀಕ್ಷಕರ ನೇಮಕ ಮಾಡಲಾಗಿದ್ದು, ಮೈಕ್ರೋ ವೀಕ್ಷಕರುಗಳನ್ನು ಕ್ರಿಟಿಕಲ್ ಮತಗಟ್ಟೆಗಳಿಗೆ ಮಾತ್ರ ನಿಯೋಜಿಸಲಾಗುವುದು.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸಿದ್ಧತೆ: ಮಸ್ಟರಿಂಗ್ ದಿನ ಮಸ್ಟರಿಂಗ್ ಕಾರ್ಯವನ್ನು ಸೆಕ್ಟರ್‍ವಾರು ಪ್ರತ್ಯೇಕ ಕೊಠಡಿಗಳಲ್ಲಿ ಮಾಡಲಾಗುವುದು. ಒಂದು ಕೊಠಡಿಗೆ ಒಬ್ಬರು ಸೆಕ್ಟರ್ ಅಧಿಕಾರಿ, ಇಬ್ಬರು ಸಿಬ್ಬಂದಿಗಳು ಹಾಗೂ ಇಬ್ಬರು ಗ್ರಾಮ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ಕೊಠಡಿಗಳಿಗೆ ಮತಗಟ್ಟೆವಾರು ಇವಿಎಂಗಳನ್ನು ಹಾಗೂ ಚುನಾವಣಾ ಸಾಮಗ್ರಿಗಳನ್ನು ಸರಬರಾಜು ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಒದಗಿಸಲಾಗುವುದು.
ಡಿ-ಮಸ್ಟರಿಂಗ್ ದಿನ: ಡಿ-ಮಸ್ಟರಿಂಗ್ ಕಾರ್ಯಕ್ಕೆ ಒಟ್ಟು 12 ಟೇಬಲ್‍ಗಳನ್ನು ಮಾಡಲಾಗಿದು, 1 ಟೇಬಲ್‍ಗೆ 4 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿಗಳು ಇವಿಎಂ ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ಲಕೋಟೆಗಳನ್ನು ಪರಿಶೀಲಿಸಿ ಪಡೆಯಲಿದ್ದಾರೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ವಿವರ: ಮಸ್ಟರಿಂಗ್ ಕಾರ್ಯವು ಮೇ 09 ಮತ್ತು ಡಿ-ಮಸ್ಟರಿಂಗ್ ಕಾರ್ಯವು ಮೇ 10 ರಂದು ನಡೆಯಲಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವು ನಗರದ ಸಂತ ಜೊಸೇಫರ ಕಾನ್ವೆಂಟ್‍ನಲ್ಲಿ ನಡೆಯಲಿದೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವು ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇ 10 ರಂದು ಡಿ-ಮಸ್ಟರಿಂಗ್ ಕಾರ್ಯ ಮುಗಿದ ನಂತರ ವಿದ್ಯುನ್ಮಾನ ಮತಯಂತ್ರಗಳು ಹಾಗೂ ಚುನಾವಣಾ ದಾಖಲೆ ಪತ್ರಗಳನ್ನು ಅದೇ ದಿನ ಮಡಿಕೇರಿ ಸಂತ ಜೊಸೇಫರ ಕಾನ್ವೆಂಟ್ ಇಲ್ಲಿ ಇರುವ ಭದ್ರತಾ ಕೊಠಡಿಗೆ ತಂದು ದಾಸ್ತಾನು ಮಾಡಲಾಗುವುದು.
ಭದ್ರತಾ ಕೊಠಡಿ: ಮೇ 10 ರಂದು ಮತದಾನ ಮುಕ್ತಾಯಗೊಂಡ ನಂತರ ಡಿ-ಮಸ್ಟರಿಂಗ್ ಕಾರ್ಯವನ್ನು ಸಂಬಂಧಿಸಿದ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಮುಗಿಸಿದ ನಂತರ ಎರಡು ಕ್ಷೇತ್ರದ ಮತಯಂತ್ರಗಳನ್ನು ಮತ್ತು ಚುನಾವಣಾ ದಾಖಲೆಗಳನ್ನು ಸಂತ ಜೋಸೆಫರ ಕಾನ್ವೆಂಟ್, ಮಡಿಕೇರಿ ಇಲ್ಲಿ ಕ್ಷೇತ್ರವಾರು ಸಿದ್ದಪಡಿಸಿರುವ ಭದ್ರತಾ ಕೊಠಡಿಯಲ್ಲಿ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ದಾಸ್ತಾನು ಮಾಡಲಾಗುವುದು.
‘ಮತಗಳ ಎಣಿಕೆ ಕಾರ್ಯ: ಮೇ 13 ರಂದು ಬೆಳಗ್ಗೆ 8 ರಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಎರಡು ವಿಧಾನಸಭಾ ಕ್ಷೇತ್ರದ ಎಣಿಕೆ ಕಾರ್ಯ ಸಂತ ಜೊಸೇಫರ ಕಾನ್ವೆಂಟ್, ಮಡಿಕೇರಿ ಇಲ್ಲಿ ಬೇರೆ ಬೇರೆ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ.’
‘ಎಣಿಕೆ ಕೇಂದ್ರದಲ್ಲಿ 14-ಇವಿಯಂ ಎಣಿಕೆ ಟೇಬಲ್, 3-ಇಟಿಪಿಬಿಎಸ್ ಎಣಿಕೆ ಟೇಬಲ್ ಮತ್ತು 4-ಅಂಚೆ ಮತಪತ್ರಗಳ ಎಣಿಕೆ ಟೇಬಲ್ ಗಳನ್ನು ಅಳವಡಿಸಲಾಗಿದೆ. ಈ ಟೇಬಲ್‍ಗಳಿಗೆ ಅಭ್ಯರ್ಥಿಗಳು ಎಣಿಕೆ ಎಜೆಂಟರುಗಳನ್ನು ನೇಮಕ ಮಾಡಲಿದ್ದಾರೆ.
ಈ ಎಣಿಕೆ ಟೇಬಲ್‍ಗಳಲ್ಲದೇ ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರ ಟೇಬಲ್ ಹಾಗೂ ಟ್ಯಾಬುಲೇಷನ್ ಟೇಬಲ್ ಇರುತ್ತದೆ. ಅಭ್ಯರ್ಥಿಗಳು ಎಣಿಕೆ ಕೇಂದ್ರದಲ್ಲಿ ಇರುವುದಕ್ಕೆ ಅವಕಾಶವಿದ್ದು, ಅವರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಎಣಿಕೆ ಕಾರ್ಯವನ್ನು ವೆಬ್‍ಕಾಸ್ಟಿಂಗ್ ಮಾಡಲಾಗುತ್ತದೆ. ಪ್ರತಿ ಇವಿಯಂ ಎಣಿಕೆ ಟೇಬಲ್‍ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಮತ್ತು ಒಬ್ಬರು ಮೈಕೋ ವೀಕ್ಷಕರು ಇರುತ್ತಾರೆ.
ಪ್ರತಿ ಅಂಚೆ ಮತಪತ್ರ ಎಣಿಕೆ ಟೇಬಲ್‍ಗೆ ಒಬ್ಬರು ಸಹಾಯಕ ಚುನಾವಣಾಧಿಕಾರಿ, ಒಬ್ಬರು ಎಣಿಕೆ ಮೇಲ್ವಿಚಾರಕರು ಮತ್ತು ಇಬ್ಬರು ಎಣಿಕೆ ಸಹಾಯಕರು ಇರುತ್ತಾರೆ. ಪ್ರತಿ ಇಟಿಪಿಬಿಎಸ್ ಎಣಿಕೆ ಟೇಬಲ್‍ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು ಮತ್ತು ಒಬ್ಬರು ಎಣಿಕೆ ಸಹಾಯಕರು ಇರುತ್ತಾರೆ.
ಚುನಾವಣಾ ಉದ್ದೇಶಕ್ಕೆ ವಾಹನ ಸೌಲಭ್ಯ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಎರಡು ವಿಧಾನಸಭಾ ಕ್ಷೇತ್ರಗಳಿಗೆ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 90 ಮಾರ್ಗಗಳು ವಾಹನ ಸೌಲಭ್ಯ 38 ಬಸ್(ಕೆಎಸ್‍ಆರ್‍ಟಿಸಿ), 11 ಮಿನಿ ಬಸ್, 15 ಮ್ಯಾಕ್ಸಿ ಕ್ಯಾಬ್, 40 ಜೀಪ್. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 117 ಮಾರ್ಗಗಳು, 46 ಬಸ್(ಕೆಎಸ್‍ಆರ್‍ಟಿಸಿ), 31 ಮಿನಿಬಸ್, 41 ಜೀಪ್.
ಈ ಚುನಾವಣೆಯಲ್ಲಿ ವಿಶೇಷಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತ ಚಲಾಯಿಸಲು ಅನುಕೂಲವಾಗುವಂತೆ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಹಾಗೂ ಸಂಜ್ಞಾ ಭಾಷಾ ವ್ಯಾಖ್ಯಾನಕಾರರ ವ್ಯವಸ್ಥೆ ಮಾಡಲಾಗುವುದು. ಮತದಾನ ಕೇಂದ್ರಕ್ಕೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆ. ಮತದಾನ ಕೇಂದ್ರದಲ್ಲಿ ಸಹಾಯಕರ ಸೇವೆ ಒದಗಿಸಲಾಗುತ್ತದೆ ಎಂದರು.
ಮೇ, 10 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸಾರ್ವತ್ರಿಕ ರಜೆ ಘೋಷಿಸಿದೆ.
‘ಮೇ, 10 ರಂದು ನಡೆಯುವ ಚುನಾವಣೆ ಸಂಬಂಧ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 271 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಕಾರ್ಯವನ್ನು ಮಾಡಲಾಗುತ್ತಿದೆ.’
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ವಲ್ನರೆಬಲ್ ಮತ್ತು ಕ್ರಿಟಿಕಲ್ ಮತಗಟ್ಟೆಗಳಿಗೆ ಸಿಎಪಿಎಫ್ ತಂಡವನ್ನು ನಿಯೋಜಿಸಲಾಗಿದೆ. ಹಾಗೆಯೇ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಅವರು ಮಾತನಾಡಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿಲ್ ರಸ್ತೆ, ಮಡಿಕೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಂಗಸಮುದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಿತಿಮತಿ ಮತಗಟ್ಟೆಗಳನ್ನು ವಿಶೇಷವಾಗಿ ಕಾಫಿ, ಅರಣ್ಯ ಮತ್ತು ವನ್ಯಜೀವಿ ಹಾಗೂ Tribal theme ಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಸಖಿ, ವಿಶೇಷ ಚೇತನರು, Ethnic, Young voters managed ಮತಗಟ್ಟೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಸಖಿ ಮತಗಟ್ಟೆಗಳು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 5, ವಿರಾಜಪೇಟೆ 5, ವಿಶೇಷ ಚೇತನರ ಮತಗಟ್ಟೆಗಳು ಮಡಿಕೇರಿ 1, ವಿರಾಜಪೇಟೆ 1, ಯುವ ಮತಗಟ್ಟೆಗಳು ಮಡಿಕೇರಿ 1, ವಿರಾಜಪೇಟೆ 1, ಥೀಮ್ ಬೇಸ್‍ಡ್ ಮತಗಟ್ಟೆಗಳು ಮಡಿಕೇರಿಯಲ್ಲಿ 2, ವಿರಾಜಪೇಟೆ 1, ಎಥಿನಿಕ್ ಮತಗಟ್ಟೆಗಳು ವಿರಾಜಪೇಟೆ 2 ಸ್ಥಾಪಿಸಲಾಗಿದೆ ಎಂದು ಜಿ.ಪಂ.ಸಿಇಒ ಅವರು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಇದ್ದರು.