ಮಡಿಕೇರಿ ಮೇ.11 : ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ರ ಮತದಾನ ಮೇ, 10 ರಂದು ನಡೆದಿದ್ದು, ಕರ್ನಾಟಕದಲ್ಲಿ ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸಲಾಗಿದೆ.
ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಮಾದರಿಯಲ್ಲಿ ಈ ಬಾರಿಯು ಸಹ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ಅಂಗವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಮತದಾನದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ.
ಲೋಕಸಭಾ ಚುನಾವಣೆ-2019 ರಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಶಂಸಿಸುವುದರ ಜೊತೆಗೆ ತನ್ನ ವರದಿ ಹಾಗೂ ಪುಸ್ತಕಗಳ ಮುಖಪುಟಗಳಲ್ಲಿ ಬಳಸಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ನಿಮಿತ್ತ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿ, ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಪತ್ರಿಕಾ ಛಾಯಾಗ್ರಾಹಕರು/ ಹವ್ಯಾಸಿ ಛಾಯಾಗ್ರಾಹಕರು ತಾವು ತೆಗೆದ ಗರಿಷ್ಠ 5 ಅತ್ಯುತ್ತಮ ಛಾಯಾಚಿತ್ರಗಳನ್ನು ಸೂಕ್ತ ಶೀರ್ಷಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿರುವ ಅಕ್ರಿಡಿಟೇಷನ್ ಕಾರ್ಡ್ ಅಥವಾ ತಮ್ಮ ಮಾಧ್ಯಮ ಕಚೇರಿ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಹಾಗೂ ಮನೆ ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಮತ್ತಿತರ ವಿವರಗಳನ್ನು ಇ-ಮೇಲ್ ಐಡಿ ktkceomedia2023@gmail.com ಸಲ್ಲಿಸುವುದು. ಸಲ್ಲಿಕೆಗಳನ್ನು ಮೇ, 20 ರಂದು ಸಂಜೆ 5 ಗಂಟೆಯೊಳಗೆ ಇ-ಮೇಲ್ ಮೂಲಕ ಸಲ್ಲಿಸಬೇಕು.
ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ, ಸಮಾಧಾನಕರ ಬಹುಮಾನ ರೂ.6 ಸಾವಿರ ಹಾಗೂ ವಿಶೇಷ ಬಹುಮಾನ ರೂ.5 ಸಾವಿರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.