ಸೋಮವಾರಪೇಟೆ ಮೇ 16 : ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದಿಂದ ಬೇಸತ್ತ ಮತದಾರರು ಕಾಂಗ್ರೆಸ್‍ಗೆ ಮತನೀಡಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗನ್ನು ಬಿಜೆಪಿ ಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸಲು ತಳಮಟ್ಟದಿಂದಲೇ ಪಕ್ಷ ಸಂಘಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಕ್ಕಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬ್ಲಾಕ್‍ನ 107 ಬೂತ್‍ಗಳಲ್ಲಿ 5 ಬೂತ್‍ಗಳಲ್ಲಿ ಮಾತ್ರ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದಿರುವುದು ಬಿಟ್ಟರೆ, ಉಳಿದ ಎಲ್ಲಾ ಬೂತ್‍ಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂದರು.
ಭ್ರಷ್ಟಾಚಾರಕ್ಕೆ ಬಿಜೆಪಿ ಪರೋಕ್ಷ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸೋಲು ಕಾಣಬೇಕಾಯಿತು. ತಾಲ್ಲೂಕು ಕಚೇರಿ ಸೇರಿದಂತೆ ಇನ್ನಿತರ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲದಂತಾಗಿದೆ. ಅಕ್ರಮ-ಸಕ್ರಮದಲ್ಲಿ ರೈತರ ಶೋಷಣೆ ಮಾಡಲಾಗಿದೆ. ಲಂಚ ನೀಡದ ಹಿನ್ನೆಲೆಯಲ್ಲಿ ದುರಸ್ತಿ ಸೇರಿದಂತೆ ಹೆಚ್ಚಿನ ಕಡತಗಳು ಕಚೇರಿಯಲ್ಲೇ ಕೊಳೆಯುತ್ತಿವೆ. ಪ್ರತಿ ಕಡತಕ್ಕೂ ಲಕ್ಷದ ಲೆಕ್ಕದಲ್ಲಿ ಹಣವನ್ನು ನಿಗದಿ ಮಾಡಿಕೊಂಡಿದ್ದಾರೆ. ಈ ಕೆಲಸಕ್ಕೆ ಬ್ರೋಕರ್‍ಗಳು ನಿಯೋಜನೆಗೊಂಡಿದ್ದಾರೆ. ಈ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಎಷ್ಟೋ ನೌಕರರು ಹಲವು ವರ್ಷಗಳಿಂದ ತಾಲ್ಲೂಕು ಕಚೇರಿಯಲ್ಲೇ ಕುಳಿತ್ತಿದ್ದಾರೆ. ಅವರುಗಳನ್ನು ವರ್ಗಾವಣೆ ಮಾಡಿದರೆ, ಆಡಳಿತ ಒಂದಷ್ಟು ಸುಧಾರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ.ಪಂ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ನಡೆದ ಕಾಮಗಾರಿಗಳಲ್ಲಿ ಗೋಲ್‍ಮಾಲ್ ನಡೆದಿರುವುದು ಗಮನಕ್ಕೆ ಬಂದಿದ್ದು, ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.
ಸಣ್ಣ ಕಾಫಿ ಬೆಳೆಗಾರರ 10ಎಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್, ವಿದ್ಯುತ್ ಬಿಲ್ ಬಾಕಿ ಮನ್ನಾದಂತಹ ರೈತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲು ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಜೆ.ಸುನಿಲ್, ಪಾವನ ಗಗನ್, ಖಜಾಂಚಿ ಸಿ.ಈ.ಚೇತನ್ ಇದ್ದರು.