ಮಡಿಕೇರಿ ಮೇ 17 : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು, ಮನೆಯ ಗೇಟ್, ಕಾಫಿ, ಅಡಿಕೆ ಬೆಳೆಗಳನ್ನು ನಾಶಪಡಿಸಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ.
ಬೆಳೆಗಾರ ಚೋವಂಡ ವಾಸು ಪೊನ್ನಪ್ಪ ಅವರ ಮನೆಯಂಗಳಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಮನೆಯ ಗೇಟ್ ಗೆ ಹಾನಿಗೊಳಿಸಿವೆ. ರಾತ್ರಿ ತೋಟಕ್ಕೆ ನುಗ್ಗಿ ಕಾಫಿ, ಅಡಿಕೆ ಬೆಳೆಗಳನ್ನು ನಾಶಪಡಿಸಿವೆ.
ಕಳೆದೆರಡು ದಿನಗಳಿಂದ ಇದೆ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಆತಂಕವನ್ನು ಸೃಷ್ಟಿಸಿವೆ. ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.